ಪುಟ:ಕ್ರಾಂತಿ ಕಲ್ಯಾಣ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೮

ಕ್ರಾಂತಿ ಕಲ್ಯಾಣ


ಆಟದ ಪ್ರಾರಂಭದಲ್ಲಿ ವೀಕ್ಷಕರ ಗುಂಪು ಆಟಗಾರರ ಸುತ್ತ ಗೋಡೆ ಕಟ್ಟಿದಂತಾಗಿತ್ತು.

ಗುಂಪಿನ ಅಂಚಿನಲ್ಲಿದ್ದ ಕರ್ಣದೇವನು ಅಗ್ಗಳನನ್ನು ಕರೆದು, “ಹೆಂಗಸರ ಆಟದಲ್ಲಿ ನಿಮಗೆ ಇಷ್ಟೇಕೆ ಆಸಕ್ತಿ ? ನಿಮ್ಮ ಸಂಗಡ ಮಾತಿದೆ, ಬನ್ನಿರಿ,” ಎಂದು ಹೊರಗೆ ಕರೆದುಕೊಂಡು ಹೋದನು.

ರಾಣಿಯ ಸಾನ್ನಿಧ್ಯವನ್ನು ಬಿಟ್ಟು ಹೊರಗೆ ಹೋಗುವ ಇಚ್ಛೆ ಅಗ್ಗಳನಿಗಿರಲಿಲ್ಲ. ಆದರೂ ಕಲ್ಯಾಣದ ಸುದ್ದಿ ತಿಳಿಯಬಹುದೆಂಬ ನಿರೀಕ್ಷೆಯಿಂದ ಕರ್ಣದೇವನ ಹಿಂದೆ ನಡೆದನು.

ಸಾಮಂತ ಶ್ರೀಮಂತ ವೀಕ್ಷಕರೆದುರಿಗೆ ಮೂರನೆಯ ಆಟ ನಡೆಯಿತಾದರೂ ಕಾಮೇಶ್ವರಿಯಾಗಲಿ, ಸುಂದರವಲ್ಲಿಯಾಗಲಿ ಸ್ವಲ್ಪ ಮಾತ್ರವೂ ವಿಚಲಿತರಾಗಲಿಲ್ಲ. ಭಿನ್ನಪ್ರಕೃತಿಯ, ಭಿನ್ನ ಅಭಿರುಚಿಯ ಪ್ರೇಕ್ಷಕರೆದುರಿಗೆ ನಿರ್ಲಿಪ್ತಭಾವದಿಂದ ತನ್ಮಯರಾಗಿ ಅಭಿನಯಿಸುವ ವಿದಗ್ಧ ನಟಿಯರಂತೆ ಅವರು ತಮ್ಮ ಆಟದಲ್ಲಿ ಮಗ್ನರಾಗಿದ್ದರು. ಒಂದು ಸಾರಿ ಬಿಜ್ಜಳನಿಗೆ, ಇನ್ನೊಂದು ಸಾರಿ ಕಾಮೇಶ್ವರಿಗೆ ಜಯವಾಗುವಂತೆ ಕಂಡರೂ ಅವರ ಒಂದೊಂದು ಕಾಯಿ ಉಳಿದಿದ್ದಂತೆ ಸುಂದರವಾಗಿ ನಿಂತು ನೋಡುತ್ತಿದ್ದ ವೀಕ್ಷಕರು ಹರ್ಷಧ್ವನಿ ಮಾಡಿದರು.

ಅನೇಕರ ಕುತ್ಸಿತ ದೃಷಿಯೆದುರಿಗೆ ತನ್ನ ಪಟ್ಟಮಹಿಷಿ ಪಗಡೆಯಾಡಿದುದು ಸೋಮೇಶ್ವರನಿಗೆ ಇಷ್ಟವಿರಲಿಲ್ಲ. ಅವನು ಅಸಹನೆಯಿಂದೆದ್ದು ಬಿಜ್ಜಳ ಕಾಮೇಶ್ವರಿಯರಿಗೆ ವಂದಿಸಿ ಹೊರಗೆ ಬಂದನು. ಸುಂದರವಲ್ಲಿ ಸಂಗಡ ಹೋದಳು.

ಕ್ರಮಿತನು ಅವರ ಹಿಂದೆ ಹೋಗಿ, “ಮಹಾಮಂಡಲೇಶ್ವರರಿಗೆ ಅಸಮಾಧಾನವಾಗಿದ್ದರೆ ಕ್ಷಮಿಸಬೇಕಾಗಿ ಬೇಡುತ್ತೇನೆ. ಪ್ರಭುಗಳ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ನನ್ನಿಂದ ಸಾಧ್ಯವೇ?” ಎಂದನು. ದ್ಯೂತಸಭೆಯ ಯೋಜನೆಗೆ ತಾನು ಕಾರಣನಲ್ಲವೆಂದು ಸೂಚಿಸುವುದು ಕ್ರಮಿತನ ಉದ್ದೇಶವಾಗಿತ್ತು.

ಸೋಮೇಶ್ವರನು ಅದನ್ನು ಗಮನಿಸದೆ, “ತಂದೆಯವರ ಈ ಜೂಜಾಟದ ಹುಚ್ಚು ಅನರ್ಥಕ್ಕೆ ಎಡೆಕೊಡದಂತೆ ನೋಡಿಕೊಳ್ಳಿ,” ಎಂದು ಹೇಳಿ ಸುಂದರವಲ್ಲಿಯನ್ನು ಕರೆದುಕೊಂಡು ಅಲ್ಲಿಂದ ಹೊರಟನು.

ನೂತನ ಮಹಾಮಂಡಲೇಶ್ವರನ ಹಠಾತ್ ನಿರ್ಗಮನದಿಂದ ಸಭಾಂಗಣದಲ್ಲಿದ್ದವರಿಗೆ ತಮ್ಮ ತಪ್ಪಿನ ಅರಿವಾಯಿತು. ಬಿಜ್ಜಳರಾಯನು ತನ್ನ ಸೊಸೆ ಮತ್ತು ಕಾಮೇಶ್ವರಿಯೊಡನೆ ಪಗಡೆಯಾಡುವುದನ್ನು ನಿಂತು ನೋಡಿ ಹರ್ಷಧ್ವನಿ ಮಾಡಿದುದು ಸಭ್ಯೋಚಿತವಲ್ಲವೆಂದು ತಿಳಿದರು. ಕ್ರಮಿತನು ಅಷ್ಟರಲ್ಲಿ ಅಲ್ಲಿಗೆ ಬಂದನು. ಅವನ ಕಿಡಿಗಣ್ಣ ಬಿರಿನೋಟದಿಂದ ಅಪಕರ್ಷಿತರಾಗಿ ಅವರು