ಪುಟ:ಕ್ರಾಂತಿ ಕಲ್ಯಾಣ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪೦

ಕ್ರಾಂತಿ ಕಲ್ಯಾಣ


ಸಂಪುಟವೂ ಸಿಕ್ಕಿದವು, ಪ್ರತಿಮೆ ಚಾಲುಕ್ಯ ಭಂಡಾರದಲ್ಲಿ ಸುರಕ್ಷಿತವಾಗಿದೆ. ದಾಳ ಸಂಪುಟಗಳನ್ನು ಸಂಶೋಧಕನ ಭಾಗವಾಗಿ ನಾನು ತೆಗೆದುಕೊಂಡೆ,” ಎಂದನು.

“ಇದು ನಿಜವಾಗಿ ದೇವತೆಗಳಿಗೆ ತಕ್ಕ ದಾಳ. ದೌಪದಿ ಕೌರವರ ದ್ಯೂತಸಭೆಗೆ ಬಂದಾಗ, ಇಂತಹ ದಾಳಗಳನ್ನು ಕೊಟ್ಟು ಆಟಕ್ಕೆ ಕರೆದಿದ್ದರೆ ಮಹಾಭಾರತದ ಕಥೆಯೇ ಬೇರೆಯಾಗುತ್ತಿತ್ತು.” -ಕಾಮೇಶ್ವರಿ ನಸುನಕ್ಕು ಹೇಳಿದಳು.

“ಏನಾಗುತ್ತಿತ್ತು ?” -ಬಿಜ್ಜಳನೆಂದನು, ಕುಹಕದ ನಗೆ ಬೀರಿ.

“ದ್ಯೂತದಲ್ಲಿ ಯುಧಿಷ್ಠಿರನು ಸೋತ ರಾಜ್ಯಕೋಶಗಳನ್ನು ಬ್ರೌಪದಿ ಗೆಲ್ಲುತ್ತಿದ್ದಳು. ಪಾಂಡವರ ವನವಾಸ ತಪ್ಪುತ್ತಿತ್ತು. ಕುರುಕ್ಷೇತ್ರದ ಮಹಾಯುದ್ಧ ನಡೆಯುತ್ತಿರಲಿಲ್ಲ.”

“ಆದರೆ ದೌಪದಿ ಕುರುಸಭೆಗೆ ಬರುವ ಮೊದಲೆ ಯುಧಿಷ್ಠಿರನು ಅವಳನ್ನು ಪಣವಾಗಿಟ್ಟು ಸೋತಿದ್ದನು. ದಾಸಿಯರಿಗೆ ದ್ಯೂತವಾಡುವ ಸ್ವಾತಂತ್ರ್ಯವಿಲ್ಲ.”

“ದ್ರೌಪದಿಯು ಪಾಂಡವರ ಮಟ್ಟಮಹಿಷಿ, ಮಕುಟಾಭಿಷಿಕ್ತೆ. ಅವಳನ್ನು ಪಣವಾಗಿಡುವ ಅಧಿಕಾರ ಯುಧಿಷ್ಠಿರನಿಗಿರಲಿಲ್ಲ. ಸಭೆಯಲ್ಲಿದ್ದ ಕುರುವೃದ್ದರ ತೀರ್ಪಿನಂತೆ ದ್ರೌಪದಿ ಆಗಲೂ ಸ್ವತಂತ್ರಳಾಗಿದ್ದಳು. ಅವಳು ಅಪೇಕ್ಷಿಸಿದ್ದರೆ ದ್ಯೂತವಾಡಬಹುದಾಗಿತ್ತು.”

"ವಾದದ ಮಟ್ಟಿಗೆ ನೀವು ಹೇಳುವುದನ್ನು ಒಪ್ಪಿಕೊಂಡರೂ ಪಣವಿಡಲು ಹಣವಿದ್ದರಲ್ಲವೆ ದ್ರೌಪದಿ ದ್ಯೂತವಾಡುವುದು. ಪಾಂಡವರ ರಾಜ್ಯಕೋಶಗಳೆಲ್ಲ ಅಷ್ಟು ಹೊತ್ತಿಗೆ ಕೌರವರಿಗೆ ಸೇರಿದ್ದವು” -ಎಂದು ಸಭಿಕನ ಅಧಿಕಾರಬಲದಿಂದ ಕ್ರಮಿತನು ನಡವೆ ಬಂದು ಹೇಳಿದನು.

“ಹೆಣ್ಣಿನ ಲಾವಣ್ಯ ವಿಭ್ರಮಗಳು ಎಚ್ಚೆತ್ತಿರುವವರೆಗೆ ಮತ್ತಾವ ಸಿರಿ ಸಂಪತ್ತುಗಳೂ ಅವಳಿಗೆ ಅಗತ್ಯವಿರುವುದಿಲ್ಲ ರಾಜಪುರೋಹಿತರೆ. ದ್ರೌಪದಿ ತನ್ನನ್ನು ತಾನೇ ಪಣವಾಗಿಟ್ಟು ಲೆತ್ತವಾಡಿ ಕೌರವರನ್ನು ಸೋಲಿಸಬಹುದಾಗಿತ್ತು.”

ಕಾಮೇಶ್ವರಿಯ ಕೆಚ್ಚಿನ ನುಡಿ ಅಲ್ಲಿದ್ದವರನ್ನು ಅಚ್ಚರಿಗೊಳಿಸಿತು. ವೃದ್ಧ ಸಾಮಂತರು ಬೆಬ್ಬೆರಗಾಗಿ ನೋಡುತ್ತಿದ್ದರು. ಕ್ರಮಿತನು ತನ್ನಲ್ಲಿ ತಾನು, “ಎಂತಹ ದಿಟ್ಟ ಹೆಂಗಸು ಇವಳು. ಪ್ರಭುಗಳ ಮೇಲೆ ತನ್ನ ಲಾವಣ್ಯ ವಿಭ್ರಮಗಳ ಬಲೆ ಬೀಸಲು ಹವಣಿಸುತ್ತಿದ್ದಾಳೆ,” ಎಂದು ಭಾವಿಸಿದನು.

ಪುಂಗಿಯ ಸ್ವರದಿಂದ ಮೈಮರೆತ ಕಾಳಿಂಗದಂತೆ ಕಾಮೇಶ್ವರಿಯ ರೂಪ ವಿಭ್ರಮ ಪ್ರತಿಭೆಗಳಿಂದ ಆಕರ್ಷಿತನಾದ ಬಿಜ್ಜಳನ ಅಂತರಂಗ ಚಲವಿಚಲವಾಗಿ ವಿವೇಕ ಮಸಗಿತ್ತು.