ಪುಟ:ಕ್ರಾಂತಿ ಕಲ್ಯಾಣ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೪೧


“ಬೇಕಾದರೆ ನಿಮಗಿದನ್ನು ನಿದರ್ಶನ ಮಾಡಿಕೊಡುತ್ತೇನೆ,”-ಕಾಮೇಶ್ವರಿ ಪುನಃ ಹೇಳಿದಳು, ಬಿಜ್ಜಳನ ಕಡೆಗೆ ಕಡೆನೋಟ ಹಾಯಿಸಿ.

“ನೀವು ಹೇಳುವುದು ನಂಬಲಾಗದ ಅದ್ಭುತ. ಅದನ್ನು ನಿದರ್ಶನ ಮಾಡಿ ಕೊಡುವುದು ಯಾರಿಗೂ ಸಾಧ್ಯವಲ್ಲ,” – ಮೋಹದ ನಿದ್ರೆಯಿಂದ ಎಚ್ಚೆತ್ತವನಂತೆ ಕಣ್ಣರಳಿಸಿ ಕಾಮೇಶ್ವರಿಯನ್ನು ನೋಡುತ್ತ ಬಿಜ್ಜಳನೆಂದನು.

“ಎಲ್ಲರೂ ನಂಬುವ, ಎಲ್ಲರೂ ಮಾಡಬಹುದಾದ ಕಾರ್ಯವನ್ನು ಮಾಡುವುದರಲ್ಲಿ ಅದ್ಭುತವೇನಿದೆ ? ಈಗ ನೋಡಿರಿ, ನಾನೂ ದ್ರೌಪದಿಯಂತೆ ಹೆಣ್ಣು. ಪತಿಯ ಅವಿವೇಕದಿಂದ ರಾಜ್ಯಕೋಶಗಳನ್ನು ಕಳೆದುಕೊಂಡ ಹೆಣ್ಣು. ನೀವು ಈ ರಾಜ್ಯದ ನಿರಂಕುಶ ಸರ್ವಾಧಿಕಾರಿ, ಭುಜಬಲಿ ಚಕ್ರವರ್ತಿ, ಮಹಾ ಸೇನಾನಿ. ನಿಮ್ಮೊಡನೆ ನಾನು ನನ್ನನ್ನೇ ಪಣವಾಗಿಟ್ಟು ಲೆತ್ತವಾಡಿ, ಕಳೆದು ಹೋದ ರಾಜ್ಯಕೋಶಗಳನ್ನು ಪುನಃ ಗೆಲ್ಲುತ್ತೇನೆ. ಇದು ನಿಮಗೊಪ್ಪಿಗೆಯೆ ?” ಕಾಮೇಶ್ವರಿಯ ಇನಿದಾದ ಕಂಠ ಮಧುರ ಗಾನದಂತೆ ಬಿಜ್ಜಳನನ್ನು ಮತ್ತೆ ಮರುಳುಗೊಳಿಸಿತು.

ಅವಳ ಮಾತುಗಳ ಹಿಂದಿದ್ದ ರಾಜಿಕ ಕೌಶಲ ಆಕಾಂಕ್ಷೆಗಳನ್ನು ಉಪೇಕ್ಷಿಸಿ ಅವನು ಅನಾಸಕ್ತನಂತೆ, “ಸ್ಪರ್ಧೆಯಲ್ಲಿ ನೀವು ಸೋತರೆ?” ಎಂದನು.

“ಸೋತರೆ?......ಕುರುಸಭೆಯಲ್ಲಿ ದ್ರೌಪದಿಗಾದ ಭಂಗವನ್ನು ನಾನು, ಲೆತ್ತ ಹಿಡಿದ ಈ ಎರಡು ಕೈಗಳಿಂದ ಎದುರಿಸಬೇಕಾಗುತ್ತದೆ. ಎಷ್ಟೇ ಮೊರೆಯಿಡಲಿ ಅಕ್ಷಯಾಂಬರವನ್ನು ಕೊಟ್ಟು ನನ್ನನ್ನು ರಕ್ಷಿಸಲು ಈ ಕಾಲದಲ್ಲಿ ಯಾವ ದೇವರೂ ಪ್ರತ್ಯಕ್ಷವಾಗುವುದಿಲ್ಲ” – ದರ್ಪದಿಂದ ನುಡಿದಳು ಕಾಮೇಶ್ವರಿ.

ಬಿಜ್ಜಳನು ಕ್ಷಣಕಾಲ ಕಣ್ಣುಗಳನ್ನು ಮುಚ್ಚಿದನು. ನಾಲ್ಕು ಸಾವಿರ ವರ್ಷಗಳನ್ನು ಕ್ಷಣಾರ್ಧದಲ್ಲಿ ಅತಿಕ್ರಮಿಸಿ ಅಂದಿನ ವೈಭವಶಾಲಿ ಕುರುಸಭೆಯ, ನೀತಿ ಭ್ರಷ್ಟ ಲಜ್ಜೆಗೇಡಿ ದೃಶ್ಯವನ್ನು ಸೃಷ್ಟಿಸಿ ಎದುರಿಗೆ ನಿಲ್ಲಿಸಿತು ಅವನ ಕಲ್ಪನಾ ದೃಷ್ಟಿ.

ಉತ್ತೇಜಿತನಾಗಿ ಅವನು, “ನಾನು ಪಣಕ್ಕೆ ಒಪ್ಪಿದ್ದೇನೆ ರಾಣಿಯವರೆ, ಆಟ ಪ್ರಾರಂಭವಾಗಲಿ,” ಎಂದನು.

ದಾಳಗಳನ್ನು ಕೈಯಲ್ಲಿ ಹಿಡಿದು ಕಾಮೇಶ್ವರಿ ಕೆಲವು ಕ್ಷಣಗಳ ನೆಟ್ಟ ದೃಷ್ಟಿಯಿಂದ ಅವುಗಳನ್ನೇ ನೋಡುತ್ತಿದ್ದಳು. ತಾವರೆಯ ಸಂಪುಟದಲ್ಲಿ ಚಿನ್ನದ ತುಂಬಿಗಳನ್ನು ಸೆರೆಹಿಡಿದಂತಿತ್ತು ಆಗ, ಆ ದಾಳಗಳು.

ಸಂಪುಟದಲ್ಲಿ ದಾಳಗಳನ್ನು ಹಾಕಿ ಸ್ಪರ್ಧೆಯನ್ನು ಪ್ರಾರಂಭಿಸುವುದು ಆಟದ ನಿಯಮ. ಆಟಗಾರರಲ್ಲೊಬ್ಬರು ಆ ಕಾರ್ಯ ಮಾಡಬೇಕಾಗಿತ್ತು. ಈಗ ಅದು ಕಾಮೇಶ್ವರಿಯ ಪಾಲಿಗೆ ಬಂದಿತ್ತು. ಆಮೇಲೆ ಆಟಗಾರರು ದಾಳಗಳನ್ನು ಕೈಯಿಂದ