ಪುಟ:ಕ್ರಾಂತಿ ಕಲ್ಯಾಣ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪೨

ಕ್ರಾಂತಿ ಕಲ್ಯಾಣ


ನೇರವಾಗಿ ಮುಟ್ಟಕೂಡದೆಂಬುದು ಆಟದ ಇನ್ನೊಂದು ನಿಯಮ. ಆಟ ಮೊದಲಾದ ಮೇಲೆ ದಾಳದಲ್ಲಿ ಬಿದ್ದ ಸಂಖ್ಯೆಗಳ ಗಣನೆ, ಫಲಶೃತಿ, ದಾಳಗಳನ್ನೆತ್ತಿ ಸಂಪುಟಕ್ಕೆ ಹಾಕುವುದು, ಈ ಕಾರ್ಯಗಳನ್ನು ಸಭಿಕನೋ ಅವನ ಸಹಾಯಕನೋ ಮಾಡುತ್ತಿದ್ದರು.

ಕಾಮೇಶ್ವರಿ ದಾಳಗಳನ್ನು ಸಂಪುಟದಲ್ಲಿ ಹಾಕಿ, ನಾಲ್ಕರಿಂದ ಶೇಷವಿಲ್ಲದೆ ಭಾಗಿಸಬಹುದಾದ ಮೊದಲ ಆರು ಅಂಕಿಗಳನ್ನು ಏಕಾಗ್ರತೆಯಿಂದ ಮನದಲ್ಲಿ ಚಿಂತಿಸಿ ದಾಳಗಳನ್ನೆಸೆದಳು.

ನಾಲ್ಕು ದಾಳಗಳೂ ಒಂದೇ ಸಂಖ್ಯೆಯನ್ನು ತೋರಿಸಿದವು.

“ನಾಲ್ಕು ಸಾರಿ ಎರಡು, ಎಂಟರ ಕೃತ,” -ಎಂದು ಸಭಿಕ ಸ್ಥಾನದಲ್ಲಿದ್ದ ಕ್ರಮಿತನು ಸ್ವರವೆತ್ತಿ ಎಸೆತದ ಫಲವನ್ನು ಹೇಳಿ, ದಾಳಗಳನ್ನು ಸಂಪುಟಕ್ಕೆ ಹಾಕಿ ಬಿಜ್ಜಳನ ಕೈಗೆ ಕೊಟ್ಟನು.

ಬಿಜ್ಜಳನು ಯಾಂತ್ರಿಕವಾಗಿ ಸಂಪುಟವನ್ನು ತೆಗೆದುಕೊಂಡನು. ಅವನ ಮನಸ್ಸು ಆಟದ ಮೇಲಿರಲಿಲ್ಲ. ಕಾಂಮೇಶ್ವರಿಯ ರೂಪ ಯೌವನ ವಿಭ್ರಮ ವಿಲಾಸಗಳ ಪರಿಗಣನೆಯಲ್ಲಿ ಮಗ್ನವಾಗಿತ್ತು ಅದು. “ಯೌವನ ಕಳೆಯುತ್ತ ಬಂದಿದ್ದರೂ ಎಂತಹ ವಿಲಾಸವತಿ ಈ ರಾಣಿ. ಚೆಲ್ಲು ಹೊನಲಾಗಿ ಹರಿಯುತ್ತಿದೆ ಕಣ್ಣುಗಳಲ್ಲಿ. ದೇಹದ ಏರು ತಗ್ಗುಗಳ ಸೌಷ್ಟವ ಈಗ ಮತ್ತಷ್ಟು ಹೆಚ್ಚಿದೆ. ಇಂತಹ ಅಸಾಧಾರಣ ರೂಪವತಿಯನ್ನು ಇಷ್ಟು ದಿನಗಳು ನಾನು ಉಪೇಕ್ಷಿಸಿದ್ದು ಹೇಗೆ?” ಎಂದು ಅವನು ತನ್ನನ್ನು ತಾನೆ ಪ್ರಶ್ನಿಸಿಕೊಂಡನು.

ಕೈಗಳು ಯಾಂತ್ರಿಕವಾಗಿ ಸಂಪುಟಗಳನ್ನಾಡಿಸಿ ದಾಳಗಳನ್ನೆರಚಿದವು. “೨-೧-೬-೪. ೧೩ರ ಕಲಿ.”

ನೋಡುತ್ತ ಕುಳಿತಿದ್ದ ವೃದ್ಧ ಸಾಮಂತರು ಸಭಿಕನಿಂದ ಫಲಶೃತಿ ಕೇಳಿ ಸ್ತಬ್ಧರಾದರು. ಚಾಲುಕ್ಯ ರಾಜ್ಯ ಕೋಶಾಗಾರಗಳು ಪಗಡೆಯಾಟದ ಒಂದೇ ಒಂದು ಎಸೆತದಿಂದ ಹೋರಾಟ ರಕ್ತಪಾತಗಳಿಲ್ಲದೆ ಕಾಮೇಶ್ವರಿಯ ವಶವಾಗುವುದೆಂದು ಕ್ರಮಿತನಾಗಲಿ, ಸಾಮಂತರಾಗಲಿ, ಕನಸಿನಲ್ಲಿ ನೆನೆಸಿರಲಿಲ್ಲ.

ಬಿಜ್ಜಳನು ನಸುನಕ್ಕು “ನಿಮ್ಮನ್ನು ರಾಜಪ್ರತಿನಿಧಿಯಾಗಿ ಮಾಡಿ ರಾಜ್ಯ ಕೋಶಾಗಾರಗಳನ್ನು ನಿಮಗೊಪ್ಪಿಸುವುದು ಮೊದಲಿಂದ ನನ್ನ ಉದ್ದೇಶವಾಗಿತ್ತು. ಲೆತ್ತ ಆ ಕಾರ್ಯ ಮಾಡಿತು. ಮುಂದಿನ ಆಟಕ್ಕೆ ಮಹಾರಾಣಿಯವರು ನನ್ನಿಂದ ಅಪೇಕ್ಷಿಸುವ ಪಣವೇನು ?” ಎಂದು ಕೇಳಿದನು.

“ನಿಮ್ಮ ಸರ್ವಾಧಿಕಾರ ಪದವಿ ಮತ್ತು ಅದಕ್ಕೆ ನೆರವಾದ ನಿಮ್ಮ ಸೇನಾಬಲ.”