ಪುಟ:ಕ್ರಾಂತಿ ಕಲ್ಯಾಣ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೪೩

-ಕಾಮೇಶ್ವರಿ ಕೂಡಲೆ ಉತ್ತರ ಕೊಟ್ಟಳು.

“ಒಪ್ಪಿಗೆ !” -ಎಂದು ಹೇಳಿ ಬಿಜ್ಜಳನು ಕ್ರಮಿತನಿಂದ ಸಂಪುಟವನ್ನು ತೆಗೆದುಕೊಂಡನು. ಆ ಆಟದಲ್ಲಿ ಮೊದಲ ಸರಿದಿ ಅವನದಾಗಿತ್ತು.

"೬, ೬, ೬, ೫, ೨೩ರ ತಿಗ್ಗ (ತ್ರೇತಾ).”

ಫಲಶೃತಿ ಕೇಳಿ ಸಾಮಂತರು ಚಪ್ಪಾಳೆ ತಟ್ಟಿದರು. ಅವರ ಆನಂದಕ್ಕೆ ಒಂದು ಮುಖ್ಯ ಕಾರಣವಿದ್ದಿತು. ಆಗಿನ ಆಟದ ನಿಯಮದಂತೆ ೨೩ರ ತಿಗ್ಗವನ್ನು ೨೪ರ ಸರ್ವೋಚ್ಚ ಕೃತದಿಂದ ಮಾತ್ರ ಗೆಲ್ಲಬಹುದಾಗಿತ್ತು. ಎಲ್ಲ ಕೃತಸಂಖ್ಯೆಯ ಎಸೆತಗಳು ತಿಗ್ಗಕ್ಕಿಂತ ಹೆಚ್ಚೆಂಬ ಸಾಮಾನ್ಯ ನಿಯಮ ಇಲ್ಲಿ ಅನ್ವಯಿಸುತ್ತಿರಲಿಲ್ಲ.

ಸಾವಿರ ಎಸೆತಕ್ಕೊಂದು ಸರ್ವೋಚ್ಚ ಕೃತ ಬೀಳಬಹುದು, ಅಥವಾ ಬೀಳದಿರಬಹುದು !-ಎಂದು ಗಣಿತಶಾಸ್ತ್ರ ನಿಷ್ಣಾತರು ಹೇಳುತ್ತಿದ್ದರು. ಈ ಅರ್ಥದ ಶ್ಲೋಕಾರ್ಥವೂ ಆಗಿನ ದ್ಯೂತಾಸಕ್ತರಲ್ಲಿ ಪ್ರಚಾರದಲ್ಲಿತ್ತು. ಪರಿಣಾಮದಲ್ಲಿ ೨೩ರ ತಿಗ್ಗ ಸರ್ವೋಚ್ಛ ಕೃತದಷ್ಟೇ ಪ್ರಭಾವಶಾಲಿಯಾದ ಎಸೆತವಾಗಿತ್ತು.

೨೩ರ ತಿಗ್ಗದ ನಿಶ್ಚಿತ ಪರಾಭವದಿಂದ ತಪ್ಪಿಸಿಕೊಳ್ಳಲು ಪ್ರತಿಸ್ಪರ್ಧಿಗೆ ಒಂದು ಉಪಾಯವಿತ್ತು. ಅದೆಂದರೆ ಎಸೆತದ ತನ್ನ ಸರದಿಯನ್ನು ಸ್ಪರ್ಧಿಗೇ ಬಿಟ್ಟುಕೊಡುವುದು. ಆಗ ಸ್ಪರ್ಧಿ ಇನ್ನೊಂದು ಸಾರಿ ದಾಳವೆಸೆದು ಯಾವುದಾದರೊಂದು ಕೃತ ಸಂಖ್ಯೆಯನ್ನು ಪಡೆದು ೨೩ರ ತಿಗ್ಗವನ್ನು ಊರ್ಜಿತಪಡಿಸಿಕೊಳ್ಳಬೇಕಾಗುತ್ತಿತ್ತು.

ಕ್ರಮಿತನು ದಾಳಗಳನ್ನು ಸಂಪುಟಕ್ಕೆ ಹಾಕಿ ಕಾಮೇಶ್ವರಿಗೆ ಕೊಡುತ್ತಿದ್ದಂತೆ ವೃದ್ಧ ಸಾಮಂತರಲ್ಲೊಬ್ಬನು ಅಡ್ಡ ಬಂದು, “ಆಟದ ಎಲ್ಲ ನಿಬಂಧನೆಗಳು ಸ್ಪರ್ಧಿಗಳಿಗೆ ತಿಳಿದಿದೆಯೆ? ತಿಳಿಯದಿದ್ದರೆ ಸಭಿಕರಾದ ನೀವು ಅವರಿಗೆ ವಿವರಿಸಬೇಕಾಗುವುದು,” ಎಂದನು.

ಕ್ರಮಿತನ ಹುಬ್ಬುಗಳು ಗಂಟಿಕ್ಕಿದವು. ಅಸಹನೆಯಿಂದ ಅವನು, “ಸ್ಪರ್ಧಿಗಳು ನಿಬಂಧನೆಗಳನ್ನು ತಿಳಿದು ಆಟಕ್ಕೆ ಕುಳಿತುಕೊಳ್ಳಬೇಕು. ವಿವರಣೆ ಸಭಿಕನ ಕರ್ತವ್ಯವಲ್ಲ.” ಎಂದನು.

“ಹಾಗಾದರೆ ನಾನು ಆ ಕಾರ್ಯ ಮಾಡುತ್ತೇನೆ.” ಎಂದು ಸಾಮಂತನು ಕಾಮೇಶ್ವರಿಯ ಕಡೆ ತಿರುಗಿ,

“ಈಗ ಮಹಾರಾಣಿಯವರು ಎಸೆತದ ಸರದಿಯನ್ನು ನಿಮ್ಮ ಸ್ಪರ್ಧಿಗೆ ಬಿಟ್ಟು ಕೊಟ್ಟರೆ ಅವರು ಕೃತಸಂಖ್ಯೆಯ ಇನ್ನೊಂದು ಎಸೆತದಿಂದ ೨೩ರ ತಿಗ್ಗವನ್ನು ಊರ್ಜಿತಪಡಿಸಿಕೊಳ್ಳಬೇಕಾಗುವುದು. ನೀವೇ ದಾಳ ಹಾಕಿದರೆ ೨೪ರ ಸರ್ವೋಚ್ಛ ಕೃತಸಂಖ್ಯೆಯಿಂದ ಮಾತ್ರ ಗೆಲ್ಲುವುದು ಸಾಧ್ಯ. ಆ ಸಂಖ್ಯೆಯ ದಾಳ ಬೀಳುವುದು