ಪುಟ:ಕ್ರಾಂತಿ ಕಲ್ಯಾಣ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೪

ಕ್ರಾಂತಿ ಕಲ್ಯಾಣ


ಆಟದಲ್ಲಿ ಬಹಳ ಅಪರೂಪ. ಸಾವಿರ ಎಸೆತಕ್ಕೊಂದು ಸಾರಿ ಎಂದು ಗಣಿತಶಾಸ್ತ್ರ ತಜ್ಞರು ಹೇಳುತ್ತಾರೆ. ಈ ಎರಡು ಮಾರ್ಗಗಳಲ್ಲಿ ಯಾವುದು ಸೂಕ್ತವೋ ಯೋಚಿಸಿ ಅದನ್ನು ಮಾಡಬೇಕಾಗಿ ನನ್ನ ಸೂಚನೆ,” ಎಂದನು.

ಕಾಮೇಶ್ವರಿ ಕಣ್ಣುಗಳನ್ನು ಮುಚ್ಚಿ ಯೋಚಿಸುತ್ತಿದ್ದಂತೆ ಬಿಜ್ಜಳನು ವೃದ್ದ ಸಾಮಂತನ ಕಡೆಗೆ ತಿರುಗಿ, “ಸ್ಪರ್ಧಿಯಾಗಿ ನಾನು ಮಾಡಲಾಗದಿದ್ದ ಕಾರ್ಯವನ್ನು ನೀವು ಮಾಡಿದಿರಿ. ಅದಕ್ಕಾಗಿ ವಂದನೆಗಳು,” ಎಂದನು.

ಕಾಮೇಶ್ವರಿ ಕಣ್ತೆರೆದು, “ನಾನು ಸರದಿಯಂತೆ ದಾಳವೆಸೆಯುತ್ತೇನೆ. ಸಾವಿರಕ್ಕೊಂದು ಸಾರಿ ಬರುವ ಆ ಸುಯೋಗ ನನ್ನ ಪಾಲಿಗೆ ಈ ಎಸೆತವೇ ಏಕಾಗಬಾರದು ?” – ಎಂದು ಹೇಳಿ, ಕ್ರಮಿತನಿಂದ ಸಂಪುಟವನ್ನು ತೆಗೆದುಕೊಂಡು ಚೆನ್ನಾಗಿ ಆಡಿಸಿ ದಾಳಗಳನ್ನೆಸೆದಳು.

ಹಾಸಂಗಿಯ ಸುತ್ತ ಕುಳಿತಿದ್ದವರೆಲ್ಲ ಬೆಬ್ಬೆರಗಾಗಿ ದಾಳಗಳನ್ನು ನೋಡಿದರು. ಕಾಮೇಶ್ವರಿಯ ಮೊಟ್ಟ ಮೊದಲ ಎಸೆತದಂತೆ ಈ ಸಾರಿಯೂ ನಾಲ್ಕು ಸಮಸಂಖ್ಯೆಗಳು?

“ನಾಲ್ಕು ಸಾರಿ ಅದು! ಸರ್ವೋಚ್ಛ ಕೃತ! ಮಹಾರಾಣಿ ಕಾಮೇಶ್ವರೀದೇವಿಯವರು ಗೆದ್ದರು.” -ಫಲಶೃತಿ ನುಡಿಯುತ್ತಿದ್ದಂತೆ ಕ್ರಮಿತನ ಕಂಠ ಕಂಪಿಸಿತು.

ಚಾಲುಕ್ಯರಾಜ್ಯಕೋಶಗಳು, ಸರ್ವಾಧಿಕಾರ ಪದವಿ, ಇವೆಲ್ಲಕ್ಕೆ ಈಗ ಮಹಾರಾಣಿ ಕಾಮೇಶ್ವರಿಯೇ ಒಡತಿ. ಅರ್ಧಗಳಿಗೆಯಲ್ಲಿ ಎಂತಹ ಅದ್ಭುತ ಪರಿವರ್ತನೆ !

ಭುಜಬಲಚಕ್ರವರ್ತಿ ಬಿಜ್ಜಳರಾಯನು ಈ ಅನಿರೀಕ್ಷಿತ, ಅನಿಶ್ಚಿತ, ಪರಾಭವಕ್ಕೆ ತಲೆಬಾಗಿ ರಾಜ್ಯಕೋಶ ಅಧಿಕಾರಗಳನ್ನು ಹೋರಾಟವಿಲ್ಲದೆ ಬಿಟ್ಟುಕೊಡುವನೆ?

ಈ ಆಶ್ಚರ್ಯಕರ ಜೂಜಾಟದ ಕಥೆ ಕೇಳಿದಾಗ ಜನರೇನನ್ನುವರು? ಅಟ್ಟಹಾಸದಿಂದ ಚಪ್ಪಾಳೆ ತಟ್ಟಿ ಬಿಜ್ಜಳನನ್ನು ಅಪಹಾಸ್ಯ ಮಾಡುವ ಸಂಭವವೇ ಹೆಚ್ಚು.

ಅಭಿಮಾನಧನನಾದ ಬಿಜ್ಜಳನು ಅದನ್ನು ಕೇಳಿ ಸುಮ್ಮನಿರುವುದು ಸಾಧ್ಯವೆ? ಸಭೆ ನೀರವ ! ನಿಸ್ತಬ್ದ !

ಸಭಾಂಗಣದ ಬೇರೆ ಕಡೆಗಳಲ್ಲಿದ್ದವರು ! ನುಡಿಗೆ ಬಾರದ ಯಾವುದೋ ಮಹಾವಿಪತ್ತು ಮೇಲೆರಗಿದಂತೆ, ಸ್ತಬ್ದರಾಗಿ ಆಟನಿಲ್ಲಿಸಿ ಭಯ ಕುತೂಹಲಗಳಿಂದ ವಿಭ್ರಾಂತರಂತೆ ಬಿಜ್ಜಳ ಕಾಮೇಶ್ವರಿಯರು ಕುಳಿತಿದ್ದ ಹಾಸಂಗಿಯ ಕಡೆ ನೋಡುತ್ತಿದ್ದರು.