ಪುಟ:ಕ್ರಾಂತಿ ಕಲ್ಯಾಣ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೪೫


ಕಾಮೇಶ್ವರಿಯ ಕಮಲನಯನಗಳ ಸರಳದೃಷ್ಟಿ ವಿಲಾಸ ವಿಭ್ರಮಗಳಿಂದ ವಿಚಲಿತವಾದಂತೆ ಬಿಜ್ಜಳನ ಮೇಲೆ ಬಿದ್ದಿತು.

“ಪ೦ಥದಂತೆ ರಾಜ್ಯಕೋಶ ಸರ್ವಾಧಿಕಾರಗಳನ್ನು ಮಹಾರಾಣಿಯವರಿಗೊಪ್ಪಿಸಿದ್ದೇನೆ,” -ಎಂದು ನುಡಿದು ಬಿಜ್ಜಳನು ರಾಜಮುಕುಟ ಮುದ್ರೆಯುಂಗುರಗಳನ್ನು ತೆಗೆದು ಕಾಮೇಶ್ವರಿಯ ಮುಂದಿಟ್ಟನು.

ಕಾಮೇಶ್ವರಿ ಅಪೇಕ್ಷಿಸಿದ್ದರೆ ಅಷ್ಟಕ್ಕೆ ಆಟ ಮುಗಿಸಬಹುದಾಗಿತ್ತು. ಆಟ ಮುಂದುವರಿಯಲು ಒತ್ತಾಯ ಪಡಿಸುವ ಅಧಿಕಾರ ಸಭಿಕನಿಗಾಗಲಿ, ಪ್ರತಿಸ್ಪರ್ಧಿಗಾಗಲಿ ಇರಲಿಲ್ಲ. ಆಟ ಮುಗಿದಿದ್ದರೆ ಬಿಜ್ಜಳನ ಪರಾಭವ ಪೂರ್ಣವಾಗುತ್ತಿತ್ತು.

ಆದರೆ ಕಾಮೇಶ್ವರಿ ಹೆಣ್ಣಿಗೆ ಸಹಜವಾದ ದುಡುಕುತನದ ಕ್ಷಣಿಕಾವೇಶದಿಂದ,

“ಇನ್ನೊಂದು ಸಾರಿ ಆಡಿ ನಾವು ಆಟ ಮುಗಿಸಬಹುದು. ಈ ಆಟದಲ್ಲಿ ನಾನು ನಿಮ್ಮಿಂದ ಗೆದ್ದ ರಾಜ್ಯಕೋಶ ಅಧಿಕಾರಗಳನ್ನು ಪಣವಾಗಿಡುತ್ತೇನೆ. ಪ್ರತಿಯಾಗಿ ನಿಮ್ಮ ಪಣವೇನು ? -ಎಂದು ಬಿಜ್ಜಳನನ್ನು ಪ್ರಶ್ನಿಸಿದಳು. ನುಡಿಯುತ್ತಿದ್ದಂತೆ ಅವಳು ಹಾರಿಸಿದ ಕಡೆ ನೋಟದ ಚೆಲ್ಲು, ಮಾತಿನ ಕರ್ಕಶತೆಯನ್ನು ಮುಚ್ಚಿತ್ತು.

“ಸರ್ವಸ್ವವನ್ನು ನಿಮಗೆ ಸೋತ ನಿರ್ಗತಿಕನು ನಾನು. ನನ್ನನ್ನು ನಾನೇ ಪಣವಾಗಿಡುತ್ತೇನೆ. ಮಹಾರಾಣಿಯವರು ಆಟ ಆರಂಭಿಸಬಹುದು,”

-ಎಂದು ಬಿಜ್ಜಳನು ಗಂಭೀರವಾಗಿ ನುಡಿದನು.

“ಈ ಆಟದಲ್ಲಿ ನೀವು ಸೋತರೆ ನನ್ನ ಗರುಡನಾಗಬೇಕಾಗುವುದು, ನೆನಪಿರಲಿ.”-ಕಾಮೇಶ್ವರಿ ನಗದನಿಯಿಂದ ನುಡಿದಳು.

“ಸಿದ್ದ. ನೀವೇ ಸೋತರೆ ?”

-ಬಿಜ್ಜಳನು ನಗುತ್ತಲೆ ಉತ್ತರಕೊಟ್ಟನು.

ಕ್ಷಣಕಾಲ ಕಾಮೇಶ್ವರಿ ನಿರುತ್ತರೆಯಾದಳು. ಆಮೇಲೆ ಅವಳು ಕಿಲ ಕಿಲ ನಕ್ಕು,

“ಬಿಜ್ಜಳರಾಯರಂತಹ ಭುಜಬಲ ಚಕ್ರವರ್ತಿಯನ್ನು ಗರುಡನಾಗಿ ಬಯುಸುವ ಹೆಣ್ಣು ಅದೃಷ್ಟದ ಪರಿವರ್ತನೆಯಾದಾಗ ಅವನ ದಾಸಿಯಾಗಲೂ ಒಪ್ಪಬೇಕಾಗುವುದಲ್ಲವೆ ?” ಎಂದು ಹೇಳಿದಳು.

ಮೂರನೆಯ ಆಟ ಮೊದಲಾಯಿತು. ಕಾಮೇಶ್ವರಿ ಅನಾಸಕ್ತಳಂತೆ ಸಂಪುಟವನ್ನು ಕ್ರಮಿತನ ಕೈಯಿಂದ ತೆಗೆದುಕೊಂಡು, ಎರಡುಸಾರಿ ಮೆಲ್ಲನೆ ಆಡಿಸಿ ದಾಳಗಳನ್ನು ಚೆಲ್ಲಿದಳು.

“ಮೂರುಸಾರಿ ೧, ೪, ಏಳರ ತಿಗ್ಗ,” ಎಂದು ಕ್ರಮಿತನು ಫಲಶೃತಿ ನುಡಿದನು.