ಪುಟ:ಕ್ರಾಂತಿ ಕಲ್ಯಾಣ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪೬

ಕ್ರಾಂತಿ ಕಲ್ಯಾಣ


“ರಾಣಿಗೆ ಅದೃಷ್ಟದ ಸರದಿ ಮುಗಿಯಿತು. ಈ ಆಟ ಪ್ರಭುಗಳಿಗೇ !” ಎಂದು ನುಡಿಯುತ್ತಿತ್ತು ಅವನ ನಿಶಿತಮತಿ.

ರಾಜಪುರೋಹಿತನ ರಹಸ್ಯೋತ್ಸಾಹ, ಅಲೆ ಅಲೆಯಾಗಿ ಹರಿದು ಬಿಜ್ಜಳನ ಚೇತನವನ್ನು ಎಚ್ಚರಿಸಿದಂತಾಯಿತು. “ಏಳರ ತಿಗ್ಗವನ್ನು ಗೆಲ್ಲಲು, ನಾಲ್ಕು ತ್ರೇತಾ ಮತ್ತು ಆರು ಕೃತಸಂಖ್ಯೆಗಳಿವೆ. ಅವುಗಳಲ್ಲೊಂದನ್ನು ಹಾಕಲಾರೆನೆ ನಾನು ?” ಎಂದು ಭಾವಿಸಿ ಅವನು ಸಂಪುಟವನ್ನು ಸರಿಯಾಗಿ ಆಡಿಸದೆ ದಾಳಗಳನ್ನು ಚೆಲ್ಲಿದನು.

“೧, ೧, ೨, ೩” ಪುನಃ ದಾಳ ಹಾಕಬೇಕು. ಇದು ನಿಮ್ಮ ಸರದಿ,”

ಎಂದು ಕ್ರಮಿತನು ದಾಳಗಳನ್ನೆತ್ತಿ ಸಂಪುಟಕ್ಕೆ ಹಾಕಿ, ಪುನಃ ಬಿಜ್ಜಳನಿಗೆ ಕೊಟ್ಟನು. ಅಷ್ಟು ಹೊತ್ತಿಗೆ ಬಿಜ್ಜಳನ ಮೋಹನಿದ್ರೆ ಹರಿದು ಪ್ರಜ್ಞೆಯ ಉದಯವಾಗಿತ್ತು. “ಪರೀಕ್ಷ್ಯತಾರ್ಯಾ ವಿಪತ್ತಿಃ !” ವಿಪತ್ತನ್ನು ಪರೀಕ್ಷಿಸಿ ಎಚ್ಚರಿಕೆಯಿಂದ ದಾಟಬೇಕು ಎಂಬ ಚಾಣಕ್ಯ ಸೂತ್ರ ತಟ್ಟನೆ ಅವನ ಕಿವಿಗಳಲ್ಲಿ ಮಿಡಿಯಿತು. ಈಗಲಾದರೂ ಎಚ್ಚರಿಕೆಯಿಂದ ದಾಳಹಾಕಿದರೆ ವಿಪತ್ತಿನಿಂದ ಪಾರಾಗಬಹುದೆಂದು ಭಾವಿಸಿ, ಸಂಪುಟವನ್ನು ನಾಲ್ಕಾರು ಸಾರಿ ಚೆನ್ನಾಗಿ ಆಡಿಸಿ ದಾಳಗಳನ್ನೆಸೆದನು.

೫, ೪, ೫, ೨೦ ರ ಉಚ್ಛಕೃತ” ಸಂತೃಪ್ತಿಯ ತುಂಬುಕಂಠದಿಂದ ಕ್ರಮಿತನು ಘೋಷಿಸಿದನು.

೨೦ರ ಉಚ್ಛ ಕೃತಸಂಖ್ಯೆಯನ್ನು ಸೋಲಿಸುವುದೆಂದರೆ ೨೪ರ ಸರ್ವೋಚ್ಛಕೃತವೊಂದೇ. ಕೆಲವೇ ನಿಮಷಗಳ ಅಂತರದಲ್ಲಿ ಒಬ್ಬಳೇ ಸ್ಪರ್ಧಿ, ಅವಳು ಚಾಲುಕ್ಯ ರಾಣಿಯೇ ಆಗಿರಲಿ, ಎರಡುಸಾರಿ ಸರ್ವೋಚ್ಛಕೃತ ಸಂಖ್ಯೆಯನ್ನು ಹಾಕುವುದು ದ್ಯೂತದ ಇತಿಹಾಸದಲ್ಲಿ ಎಲ್ಲಿಯೂ ಯಾವಾಗಲೂ ನಡೆಯದಿದ್ದ ಘಟನೆ. ಈ ಸಾರಿ ಪ್ರಭುಗಳಿಗೆ ವಿಜಯವು ನಿಶ್ಚಿತ.....

ಎಂದು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ ಕ್ರಮಿತನು ಒಂದೊಂದಾಗಿ ದಾಳಗಳನ್ನು ಆರಿಸಿ ಸಂಪುಟಕ್ಕೆ ಹಾಕಿ ಕಾಮೇಶ್ವರಿಗೆ ಕೊಟ್ಟನು.

ಕೈಗಳ ಚಲನೆಯಿಂದ ಅವನ ಮನೋಗತವನ್ನು ಕಾಮೇಶ್ವರಿ ಅರಿತಳು. ತಿರಸ್ಕಾರದ ಸೆಳೆಮಿಂಚು ಕ್ಷಣಕಾಲ ಅವಳ ಮುಖವನ್ನು ಬೆಳಗಿತು. “ನನ್ನ ಸಲುವಾಗಿ ಶೂಲಕ್ಕೇರಿಸಲ್ಪಟ್ಟ ಆ ಅಜ್ಞಾತ ಗ್ರಾಮ್ಯ ಕವಿ ಹಾಡಿದಂತೆ ನಾನು ನಿಜವಾಗಿ ಚಾಲುಕ್ಯ 'ಲಕ್ಕಿ' ಆಗಿದ್ದರೆ, ಗಣಿತಶಾಸ್ತ್ರ ತಜ್ಞರ ನಿರ್ಣಯವನ್ನು ವಿಫಲಗೊಳಿಸಿ, ಕೆಲವೇ ನಿಮಿಷಗಳ ಅಂತರದಲ್ಲಿ, ಎರಡನೆಯ ಸಾರಿ ನಾನು ಸರ್ವೋಚ್ಛ ಕೃತ ಸಂಖ್ಯೆ ಹಾಕುತ್ತೇನೆ,” ಎಂಬ ದೃಢ ನಿಶ್ಚಯದಿಂದ ಕಾಮೇಶ್ವರಿ ಸಂಪುಟವನ್ನು ಆಡಿಸಿ ದಾಳಗಳನ್ನೆಸೆದಳು.