ಪುಟ:ಕ್ರಾಂತಿ ಕಲ್ಯಾಣ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

ಕ್ರಮಿತನು ವರದಿಯನ್ನು ಓದಿಕೊಂಡು, “ಅಗ್ಗಳನು ಕವಿಯೆಂದು ನಿನಗೆ ತಿಳಿದದ್ದು ಹೇಗೆ ?” ಎಂದು ಪ್ರಶ್ನಿಸಿದನು.

ಕ್ರಮಿತನ ಅನಿರೀಕ್ಷಿತ ಆಸಕ್ತಿಯಿಂದ ಧನ್ಯನಾದೆನೆಂದು ತಿಳಿದ ಕಾರ್ಯಕರ್ತನು ಇಮ್ಮಡಿ ವಿನಯದಿಂದ ಕೈಕಟ್ಟಿ ನಿಂತು ಹೇಳಿದನು : “ಮನುಷ್ಯರ ಚಹರೆ ನೋಡಿ ಅವರ ವೃತ್ತಿ ಅಂತಸ್ತುಗಳನ್ನು ತಿಳಿಯುವ ಚತುರತೆ ನನಗೆ ಚಿಕ್ಕಂದಿನಿಂದ ಅಭ್ಯಾಸವಾಗಿದೆ. ನನ್ನ ತಂದೆ ಗೋವೆಯಲ್ಲಿ ಒಂದು ದೊಡ್ಡ ಪ್ರವಾಸಿಗೃಹದ ಮಾಲಿಕರಾಗಿದ್ದರು. ಅವರ ಮೇಲ್ವಿಚಾರಣೆಯಲ್ಲಿ ನಾನು ಅನೇಕ ವರ್ಷಗಳು ಕೆಲಸಮಾಡಿದ್ದೇನೆ.

“ಅಗ್ಗಳನ ಚಹರೆಯಲ್ಲಿ ನೀನು ಕಂಡ ವಿಶೇಷವೇನು?”

ಕಾರ್ಯಕರ್ತನು ಯೋಚಿಸಿ ಉತ್ತರ ಕೊಟ್ಟನು: “ಸಾಮಾನ್ಯ ಜನರಿಗೂ ಕವಿಗೂ ಇರುವ ಅಂತರ ಕಣ್ಣಿಗೆ ಸಂಬಂಧಿಸಿದ್ದು. ಕವಿಯ ದೃಷ್ಟಿ ಬಾಹ್ಯ ಜಗತ್ತಿನೊಡನೆ ವ್ಯವಹರಿಸುವಾಗಲೂ ಅಂತರ್ಮುಖವಾಗಿರುತ್ತದೆ. ಕವಿ ಕಣ್ಣಿಂದ ಒಂದು ವಸ್ತುವನ್ನು ನೋಡುವಾಗ ಮನಸ್ಸಿನಲ್ಲಿ ಅದನ್ನು ಹೋಲುವ ಮತ್ತಾವುದೋ ವಸ್ತುವನ್ನು ಚಿಂತಿಸುತ್ತಾನೆ. ಈ ಪೂರ್ವಾಹ್ನ ಎರಡನೆಯ ಪ್ರಹರದಲ್ಲಿ ಆ ಮೂವರು ಪ್ರವಾಸಿಗಳು ಇಲ್ಲಿಗೆ ಬಂದಾಗ ಅಗ್ಗಳದೇವನ ದೃಷ್ಟಿ ಕಣ್ಣಿಗೆ ಕಾಣದ ಯಾವುದೋ ಅಲೌಕಿಕ ಲೋಕವನ್ನು ಹುಡುಕುತ್ತಿರುವಂತೆ ಕಂಡಿತು. ಬ್ರಹ್ಮರಾಜ ಸೇಟರ ಪರಿಚಯ ನನಗಿಲ್ಲದಿದ್ದ ಪಕ್ಷದಲ್ಲಿ, ಅಮಲೇರಿದ ವ್ಯಕ್ತಿಯೊಬ್ಬನನ್ನು ಅವನ ಇಬ್ಬರು ಗೆಳೆಯರು ವಿಶ್ರಾಂತಿಗಾಗಿ ಪಾಂಥ ನಿವಾಸಕ್ಕೆ ಕರೆತಂದಿದ್ದಾರೆಂದು ತಿಳಿಯುತ್ತಿದ್ದೆ.”

“ಅಗ್ಗಳನು ಇಲ್ಲಿಗೆ ಬಂದಾಗ ಮದ್ಯಪಾನ ಮಾಡಿರಬಹುದು” ಕ್ರಮಿತನು ನಸುನಕ್ಕು ನುಡಿದನು.

“ಬ್ರಹ್ಮರಾಜ ಸೇಟರ ಹತ್ತಿರ ಅದು ಸಾಧ್ಯವಲ್ಲ. ಅವರು ನಿಷ್ಠಾವಂತರಾದ ಸಾತ್ವಿಕ ಮನುಷ್ಯರು. ಅಗ್ಗಳನು ನಿಜವಾಗಿ ಮದ್ಯಪಾನ ಮಾಡಿದ್ದರೆ, ಬ್ರಹ್ಮರಾಜ ಸೇಟರು ಅವನನ್ನು ದಾರಿಯ ಮಗ್ಗಲಲ್ಲಿ ಮಲಗಿಸಿ ಬರುತ್ತಿದ್ದರು. ಮದ್ಯಪಾನವೆಂದರೆ ಅಷ್ಟೊಂದು ಅಸಹನೆ ಅವರಿಗೆ.”

“ಹಾಗಾದರೆ ಅಗ್ಗಳನ ಆ ಅವಸ್ಥೆಗೆ ಬ್ರಹ್ಮರಾಜ ಸೇಟರು ಏನು ಸಮಾಧಾನ ಹೇಳಿದರು?”

“ಬ್ರಹ್ಮರಾಜ ಸೇಟರು ಏನೂ ಹೇಳಲಿಲ್ಲ. ಅವರ ಕಾರ್ಯದರ್ಶಿ ಶಿವಗಣ ಭಂಡಾರಿ ನನ್ನನ್ನು ಪ್ರತ್ಯೇಕವಾಗಿ ಕರೆದು......"

“ಏನು ಹೇಳಿದನು?”