ಪುಟ:ಕ್ರಾಂತಿ ಕಲ್ಯಾಣ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೪೭

ಆ ಚರಿತ್ರಾರ್ಥ ಮಾಘ ಶುದ್ಧ ನವಮಿಯ ರಾತ್ರಿ ಮೊದಲ ಯಾಮದಲ್ಲಿ, ಮಂಗಳವೇಡೆಯ ಕಲಚೂರ್ಯ ಅರಮನೆಯ ದ್ಯೂತಶಾಲೆಯಲ್ಲಿ ಅದ್ಭುತವೊಂದು ನಡೆಯಿತು. ಕಾಮೇಶ್ವರಿ ಎಸೆದ ದಾಳಗಳು ಅಂದು ಎರಡನೆಯ ಸಾರಿ ಸಮಾನ ಸಂಖ್ಯೆಯ ಸರ್ವೋಚ್ಛ ಕೃತವನ್ನು ಮೆರೆದವು.

ಕ್ರಮಿತನು ಸ್ಥಂಭಿತನಾದನು. ಕೆಲವು ಕ್ಷಣಗಳು ಅವನ ವಾಕ್ಯಕ್ತಿ ಉಡುಗಿತು.

ವೃದ್ಧ ಸಾಮಂತರು ಎವೆಯಿಕ್ಕದೆ ದಾಳಗಳನ್ನು ನೋಡುತ್ತ ಬರೆದ ಬೊಂಬೆಗಳಂತೆ ಕುಳಿತಿದ್ದರು.

“ಏಕೆ! ಸಭಿಕ ಮಹಾಶಯರು ಫಲಶೃತಿ ಘೋಷಿಸುವುದಿಲ್ಲವೆ ?”

-ಮೃದುವಾಗಿ ನಕ್ಕು ಬಿಜ್ಜಳನು ನುಡಿದನು.

ಕ್ರಮಿತನು ಚೇತರಿಸಿಕೊಂಡು ಕಂಪಿಸುವ ದನಿಯಿಂದ, “ನಾಲ್ಕುಸಾರಿ ಆರರ ಸರ್ವೋಚ್ಚಕೃತ. ಮಹಾರಾಣಿ ಕಾಮೇಶ್ವರೀ ದೇವಿಯವರು ಗೆದ್ದರು,” ಎಂದು ಮುಗಿಸಿದನು.

“ಪಣದ ವಿವರಗಳನ್ನು ಹೇಳದೇ ಫಲಶೃತಿ ಮುಗಿಯುವುದಿಲ್ಲ.”

-ಪುನಃ ಬಿಜ್ಜಳನು ಎಚ್ಚರಿಸಿದನು.

ಈ ಆಟದ ಪಣದಂತೆ ಕಲಚೂರ್ಯ ಭುಜಬಲಚಕ್ರವರ್ತಿ ಬಿಜ್ಜಳರಾಯರು ಚಾಲುಕ್ಯ ಮಹಾರಾಣಿ ಕಾಮೇಶ್ವರೀದೇವಿಯವರ....”

-ಮುಂದೆ ಹೇಳಲು ಕ್ರಮಿತನು ಶಕ್ತನಾಗಲಿಲ್ಲ. ಬಿಜ್ಜಳನು ತಾನೇ ಪೂರೈಸಿದನು: “ಚಾಲುಕ್ಯರಾಣಿ ಕಾಮೇಶ್ವರೀದೇವಿಯವರ ಗರುಡನಾಗುವರು,” ಎಂದು.

ಕಾಮೇಶ್ವರಿಯ ಮುಖ ಸಂತುಷ್ಟಿಯ ಮಂದಹಾಸದಿಂದ ಅರಳಿತು.

“ಹಿಂದಿನಂತೆ ಮುಂದೆಯೂ ನೀವು ಚಾಲುಕ್ಯರಾಜ್ಯದ ಮೆಚ್ಚಿನ ಸರ್ವಾಧಿಕಾರಿ ಯಾಗಿರಬೇಕೆಂದು ನನ್ನ ಇಚ್ಛೆ. ನನ್ನ ನೆಚ್ಚಿನ ಗರುಡರಾಗಿ ನನ್ನ ಕೈಯಿಂದ ನೀವು ಈ ಲಾಂಛನಗಳನ್ನು ಸ್ವೀಕರಿಸಬೇಕು.” -ಎಂದು ಹೇಳಿ ಕಾಮೇಶ್ವರಿ ಎದುರಿಗಿದ್ದ ರಾಜಮಕುಟ ಮುದ್ರೆಯುಂಗುರಗಳನ್ನು ತೆಗೆದು ಬಿಜ್ಜಳನಿಗೆ ಕೊಟ್ಟಳು.

ವೃದ್ಧ ಸಾಮಂತರು ಆಗ ಕೈತಟ್ಟಿ ಜಯಘೋಷಮಾಡಿದರು.

ಕಲಚೂರ್ಯ ಮಂಡಲೇಶ್ವರ ಕುಮಾರ ಸೋಮೇಶ್ವರನ ಪಟ್ಟಾಭಿಷೇಕ ಸಂದರ್ಭದಲ್ಲಿ, ಬಿಜ್ಜಳನ ರಾಜ್ಯಭಾರ ನಿರೂಪಣಾನಂತರ ನಡೆದ ದ್ಯೂತಸಭೆ ಮುಗಿದದ್ದು ಹೀಗೆ.

ಪರಿವಾರದೊಡನೆ ಸಭಾಂಗಣದಿಂದ ಹೊರಗೆ ಹೋಗುತ್ತಿದ್ದಂತೆ ಕಾಮೇಶ್ವರಿಗೆ ಅಗ್ಗಳನ ನೆನಪಾಯಿತು. ಬೀಳ್ಕೊಡಲು ಬಾಗಿಲವರೆಗೆ ಬಂದಿದ್ದ ಕ್ರಮಿತನ ಕಡೆ