ಪುಟ:ಕ್ರಾಂತಿ ಕಲ್ಯಾಣ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೦

ಕ್ರಾಂತಿ ಕಲ್ಯಾಣ


ಮಸೆಯುತ್ತಿದ್ದಾರೆ. ಈ ವಿರೋಧ ಉಗ್ರರೂಪ ತಾಳುವ ಮೊದಲೇ ರಾಣಿಯವರು ಇಲ್ಲಿಂದ ಹೊರಟುಹೋದರೆ ಒಳ್ಳೆಯದು. ಇದನ್ನು ತಿಳಿಸುವುದಕ್ಕಾಗಿಯೇ ನಾನು ನಿಮ್ಮಲ್ಲಿಗೆ ಕರೆತಂದದ್ದು.”

ಒಂದೇ ಸಾರಿಗೆ ನಾಲ್ಕು ಬಟ್ಟಲು ಮಧುವನ್ನು ಕುಡಿದ ಪ್ರಮತ್ತನಿಗೆ ಸಾಧ್ಯವಿದ್ದಷ್ಟು ಗಾಂಭೀರ್ಯದಿಂದ ಕರ್ಣದೇವನು ಈ ಮಾತುಗಳನ್ನು ಹೇಳಿದನು.

ಇದಕ್ಕೆ ತಾನು ಕೊಡುವ ಉತ್ತರ ಕರ್ಣದೇವನಿಗೆ ತೃಪ್ತಿಕರವಾಗಿದ್ದರೆ ಮಾತ್ರವೆ ಇಲ್ಲಿಂದ ನಿರಾಪದವಾಗಿ ಹೊರಗೆ ಹೋಗಬಹುದೆಂದು ಅಗ್ಗಳನು ತಿಳಿದನು.

“ಬಿಜ್ಜಳರಾಯರ ವಿಶೇಷಾಹ್ವಾನದಂತೆ ಅವರ ಅತಿಥಿಯಾಗಿ ಮಹಾರಾಣಿಯವರು ಮಂಗಳವೇಡೆಗೆ ಬಂದಿದ್ದಾರೆ. ಸ್ವಯಂ ಬಿಜ್ಜಳರಾಯರೇ ಮಹಾರಾಣಿಯವರ ಪ್ರವಾಸ ಕಾರ್ಯಕ್ರಮವನ್ನು ಗೊತ್ತುಮಾಡಿದ್ದಾರೆ. ಆ ವಿಚಾರದಲ್ಲಿ ನಾನು ಪ್ರವೇಶಿಸುವುದು ಹೇಗೆ ?” -ಎಂದು ಅವನು ವಿನಯವಾಡಿದನು.

“ಬಿಜ್ಜಳರಾಯರೊಡನೆ ಪಗಡೆಯಾಟಕ್ಕೆ ಕುಳಿತು ಮೋಹದ ಬಲೆ ಬೀಸಲು ಅವರೇ ಗೊತ್ತು ಮಾಡಿದರಲ್ಲವೆ ?” -ನಗೆ ಹಾರಿಸಿ ಕಟಕಿಯಾಡಿದನು ಕರ್ಣದೇವ.

ಅಗ್ಗಳನು ಮೌನ. ಅದಕ್ಕೆ ಅವನು ಕೊಡಬಹುದಾದ ಉತ್ತರವೇನೂ ಇರಲಿಲ್ಲ.

ಮುಂದುವರೆದು ಕರ್ಣದೇವ, "ನೀವು ನನ್ನ ಪಾನಗೋಷ್ಠಿಯ ಗೆಳೆಯರು, ಅಗ್ಗಳ. ನಿಮಗೆ ನಾನು ಸುಳ್ಳು ಹೇಳುವುದಿಲ್ಲ. ಚತುರೆಯಾದ ಗಣಿಕೆಯ ಎಲ್ಲ ಗುಣಗಳೂ ನಿಮ್ಮ ರಾಣಿಯಲ್ಲಿವೆ. ನಾಲ್ವೇ ದಿನದಲ್ಲಿ ಅವಳು ಅಣ್ಣನವರನ್ನು ಮರುಳುಮಾಡಿ ಕಿರುಬೆರಳ ಕೊನೆಯಲ್ಲಿ ಕುಣಿಸುತ್ತಿದ್ದಾಳೆ,” ಎಂದನು.

ಕಾಮೇಶ್ವರಿಯನ್ನು ಕುರಿತ ಈ ಕಲುಷಿತ ಆಪಾದನೆಯನ್ನು ಕೇಳಿ ಚೇಳು ಕುಟುಕಿದಂತಾಯಿತು ಅಗ್ಗಳನಿಗೆ. ಮನಸ್ಸಿನ ಅಸಮಾಧಾನವನ್ನು ನುಂಗಿಕೊಂಡು ಅವನು,

“ರಾಜಾಂತಃಪುರಗಳ ವಿಲಾಸ ವಿಭ್ರಮಗಳ ನಡುವೆ ನೀವು ಬೆಳೆಸುತ್ತಿರುವುದು ರಾಜಪುತ್ರಿಯರನ್ನಲ್ಲ, ರಾಜಗಣಿಕೆಯರನ್ನು, ಕರ್ಣದೇವರಸರೆ. ಮಹಾರಾಣಿಯವರು ಹುಟ್ಟಿಗೆ ತಕ್ಕಂತೆ ನಡೆಯುತ್ತಿದ್ದಾರೆ.” ಎಂದನು.

ಅಗ್ಗಳನ ಕಟುವ್ಯಂಗ್ಯ ಕರ್ಣದೇವನಿಗೆ ಅರ್ಥವಾಗಲಿಲ್ಲ. ಪುನಃ ಅವನು,

“ನಾನು ಅನುಭವದಿಂದ ಹೇಳುತ್ತಿದ್ದೇನೆ, ಅಗ್ಗಳ. ಚಾಲುಕ್ಯ ರಾಜ್ಯದ ಎಲ್ಲ ವರ್ಗದ ಹೆಂಗಸರ ಅನುಭವವಿದೆ ನನಗೆ. ಕಾಮೇಶ್ವರಿಯಂತಹ ಚತುರೆಯಾದ