ಪುಟ:ಕ್ರಾಂತಿ ಕಲ್ಯಾಣ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೫೧


ಹೆಣ್ಣು ನಮ್ಮ ಗಣಿಕವಾಸದ ಹೆಗ್ಗಡತಿಯರಲ್ಲಿಯೂ ಸಿಕ್ಕುವುದಿಲ್ಲ,” ಎಂದನು.

“ನಾನೂ ಅನುಭವದಿಂದ ಹೇಳುತ್ತಿದ್ದೇನೆ, ಕರ್ಣದೇವರಸರೆ. ನಿಮ್ಮ ರಾಜಾಂತಃಪುರಗಳ ಕುಲೀನ ಗಣಿಕೆಯರ ನಡುವೆ ರಾಣಿ ಕಾಮೇಶ್ವರಿ, ನೀರುಕೋಳಿಗಳ ಜೊತೆಗಿದ್ದ ರಾಜಹಂಸಿಯಂತೆ. ನಿಮ್ಮ ದೃಷ್ಟಿಗೆ ಅವರು ರಾಜ ಗಣಿಕೆಯಂತೆ ಕಂಡರೂ ವಾಸ್ತವದಲ್ಲಿ ನಿಜವಾದ ಸತಿ. ಕರ್ಹಾಡದ ವಿಲಾಸಮಯ ರಾಜಾಂತಃಪುರದಲ್ಲಿ ತುಂಬು ಯೌವನದ ಆರು ವರ್ಷಗಳನ್ನು ಕಳೆದರೂ ಅವರು ಸತಿಯಾಗಿಯೇ ಉಳಿದಿದ್ದಾರೆ. ಕುಮಾರ ಪ್ರೇಮಾರ್ಣವನ ಹಿತಸಾಧನೆಯೊಂದೇ ಅವರ ಏಕಮಾತ್ರ ಧ್ಯೇಯ. ನನಗೆ ತಿಳಿದಂತೆ ಬಿಜ್ಜಳರಾಯರನ್ನು ಮೋಹದಲ್ಲಿ ಕೆಡಹುವ ಇಚ್ಛೆಯೂ ಅವರಿಗಿರುವುದಿಲ್ಲ.”

-ಅಗ್ಗಳನು ಆವೇಶದಿಂದ ಹೇಳಿದನು. ಈ ಅನಪೇಕ್ಷಿತ ಸಂಭಾಷಣೆಯನ್ನು ಸಾಧ್ಯವಿದ್ದಷ್ಟು ಬೇಗ ಮುಗಿಸುವುದು ಅವನ ಹಂಚಿಕೆಯಾಗಿತ್ತು.

ಕರ್ಣದೇವ ಗಹಗಹಿಸಿ ನಕ್ಕು, “ಏಳು ವರ್ಷಗಳ ಹಿಂದೆ, ಪ್ರೇಮಾರ್ಣವ ಹುಟ್ಟುವ ಮೊದಲು ನಡೆದ ಒಂದು ಕಥೆ ಹೇಳುತ್ತೇನೆ. ಆಗ ನೀವು ತಿಳಿಯುವಿರಿ, ಕಾಮೇಶ್ವರಿ ಎಂತಹ ಹೆಣ್ಣು ಎಂಬುದನ್ನು,” -ಎಂದು ಹೇಳಿ ಮಧುವಿಗಾಗಿ ದಾಸಿಯನ್ನು ಕೂಗಿದನು.

“ವಾದ ಮುಗಿಯಿತು, ಈಗ ಕಥೆ ! ಚಾಲುಕ್ಯ ರಾಜ್ಯದ ವಿನಾಶಕ್ಕಾಗಿಯೇ ಈ ಕಲಚೂರ್ಯ ರಾಜವಂಶ ಉತ್ತರಾಪಥದಿಂದ ಇಲ್ಲಿಗೆ ಬಂದಿತೇ ?” ಎಂದು ಮನದಲ್ಲಿ ಚಿಂತಿಸಿ ಅಗ್ಗಳನ್ನು ಪ್ರಕಟವಾಗಿ,

“ನಿಮ್ಮ ಕಥೆ ಕೇಳುತ್ತ ಕುಳಿತುಕೊಳ್ಳುವ ಅವಕಾಶ ಈಗ ನನಗಿಲ್ಲ ಕರ್ಣ ದೇವರಸರೆ, ದಯಮಾಡಿ ಕ್ಷಮಿಸಿರಿ. ಇಷ್ಟು ಹೊತ್ತಿಗೆ ದ್ಯೂತಸಭೆ ಮುಗಿದಿರಬೇಕು. ನಿಮ್ಮ ಎಚ್ಚರಿಕೆಯ ನುಡಿಗಳನ್ನು ಇಂದೇ ರಾಣಿಯವರಿಗೆ ತಿಳಿಸುತ್ತೇನೆ. ಅವರು ಇಚ್ಛೆ ಬಂದಂತೆ ಮಾಡಲಿ,” ಎಂದು ಹೇಳಿ ಪುನಃ ಹೊರಡಲು ಅನುವಾಗಿ ಎದ್ದನು.

ತುಂಬಿದ ಮಧುಪಾತ್ರೆಯನ್ನು ಹಿಡಿದು ಎದುರಿಗೆ ಬಂದಿದ್ದಳು ದಾಸಿ.

ಅಗ್ಗಳನ ಕಡೆ ತಿರುಗಿ ಕರ್ಣದೇವ, “ಈ ಹೊಸ ಮಧುವಿನ ಒಂದು ಬಟ್ಟಲು ಕುಡಿದು ಕೊಂಚ ಹೊತ್ತು ಕುಳಿತರೆ ಕೆಲವೇ ಮಾತುಗಳಲ್ಲಿ ಕಥೆ ಮುಗಿಸಿಬಿಡುತ್ತೇನೆ. ಪಂಡಿತ, ಕವಿ, ಕಾವ್ಯೋಪದೇಶಕರು ನೀವು. ನಿಮ್ಮಂಥವರು ಕೇಳಬೇಕಾದ ಕಥೆ ಅದು. ಅಲ್ಲದೆ.....ಕಾಮೇಶ್ವರೀ ದೇವಿಯವರಿಗೆ ಎಚ್ಚರಿಕೆ ಕೊಡುವ ಅಗತ್ಯವೂ ಇರುವುದಿಲ್ಲ ಈಗ. ನಾನು ಅದಕ್ಕೆ ವ್ಯವಸ್ಥೆ ಮಾಡಿದ್ದೇನೆ.” ಎಂದನು.