ಪುಟ:ಕ್ರಾಂತಿ ಕಲ್ಯಾಣ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೪

ಕ್ರಾಂತಿ ಕಲ್ಯಾಣ


ಆನಂದದಿಂದ ನಾನು ಮಧುಪಾನ ಮಾಡುತ್ತ ಕೊಠಡಿಯಲ್ಲಿ ಕುಳಿತಿದ್ದಂತೆ ಒಂದು ಅಚಾತುರ್ಯ ನಡೆಯಿತು.

“ರಾಣಿಯ ಸಂಗಡ ಶೀಲವಂತನೆಂಬ ಚಿತ್ರಗಾರ ಹುಡುಗ ಬಂದಿದ್ದ. ರಾಣಿಯ ಭಟರು ಮತ್ತು ಬೋಯಿಗಳೊಡನೆ ಗ್ರಾಮದಲ್ಲಿಯೇ ಇರಲು ಅವನಿಗೆ ಹೇಳಿತ್ತು. ಹೇಗೋ ನನ್ನ ಹಂಚಿಕೆಯ ಸುಳಿವು ತಿಳಿದುಕೊಂಡು ಅವನು ಬಿಡಾರಕ್ಕೆ ಬಂದು, ನಾನು ಕುಳಿತಿದ್ದ ಕೊಠಡಿಯ ಬಾಗಿಲು ಮುಚ್ಚಿ ಹೊರಗೆ ಚಿಲುಕ ಹಾಕಿದ. ಕುಸುಮಾವಳಿಗೂ ಅದೇ ಗತಿಯಾಯಿತು. ಬಿಡಾರದ ಬೇರೆ ಬೇರೆ ಕೊಠಡಿಗಳಲ್ಲಿ ಪರಸ್ಪರ ಮಿಲನಕ್ಕಾಗಿ ಹಂಬಲಿಸುತ್ತ ನಾವು ರಾತ್ರಿಯನ್ನು ಕಳೆದವು. ಕೈಗೆ ಸಿಕ್ಕಿದ್ದ ಹಣ್ಣು ಬಾಯಿಗೆ ಬರಲಿಲ್ಲವೆಂಬ ದುಃಖದಿಂದ ಮರುಗಿದ ನಾನು ಕೊಠಡಿಯಲ್ಲಿ ಇದ್ದ ಮಧುವನ್ನೆಲ್ಲ ಕುಡಿದುಬಿಟ್ಟೆ. ಮತ್ತನಾಗಿ ಮಲಗಿ ನಿದ್ದೆ ಮಾಡಿದೆ. ಎಚ್ಚರವಾದಾಗ ಬೆಳಗಿನ ಮೊದಲ ಜಾಮ ಕಳೆದಿತ್ತು. ನನ್ನ ಕೋಪಕ್ಕೆ ಹೆದರಿ ರಾಣಿ ಕಾಮೇಶ್ವರಿ ಕುಸುಮಾವಳಿಯನ್ನು ಸಂಗಡ ಕರೆದುಕೊಂಡು ಕಲ್ಯಾಣಕ್ಕೆ ಹೊರಟು ಬಿಟ್ಟಿದ್ದಳು. ಬಿಡಾರದಲ್ಲಿ ನನ್ನ ಕುದುರೆ ಮತ್ತು ಸಂಗಡಿದ್ದ ಭಟನು ಮಾತ್ರ ಇದ್ದರು.

“ಅಂದೇ ನಾನು ಕಲ್ಯಾಣಕ್ಕೆ ಹಿಂದಿರುಗಿದೆ. ಸೇಡು ತೀರಿಸಿಕೊಳ್ಳುವ ಅವಕಾಶ ಹುಡುಕುತ್ತಿದ್ದಂತೆ ನನ್ನ ಕಡೆಯ ಭಟರು ಶೀಲವಂತನನ್ನು ಸೆರೆಹಿಡಿದು ತಂದರು. ಅವನ ಹತ್ತಿರ ರಾಣಿಯ ರತ್ನಖಚಿತವಾದ ಕಡಗ. ರಾಣಿ ಅದನ್ನು ತಾನೇ ಅವನಿಗೆ ಕೊಟ್ಟಿದ್ದಳಂತೆ. ಕಡಗವನ್ನು ತೆಗೆದುಕೊಂಡು ಚಾಲುಕ್ಯ ಬಿಡಾರಕ್ಕೆ ಹೋಗಿ ರಾಣಿಗೆ ತೋರಿಸಿದೆ. ಶೀಲವಂತ ವಿಪತ್ತಿನಲ್ಲಿರುವನೆಂದು ತಿಳಿದು ಕಾಮೇಶ್ವರಿ ಅವನ ಪ್ರಾಣಭಿಕ್ಷೆ ಬೇಡಿದಳು. 'ಶೀಲವಂತ ಉಳಿಯಬೇಕಾದರೆ ನೀವು ಈ ರಾತ್ರಿಯನ್ನು ನನ್ನೊಡನೆ ಕಳೆಯಬೇಕು' ಎಂದೆ ನಾನು, ಒಪ್ಪಿಕೊಂಡಳು. ಗ್ರಾಮ ಬಿಡಾರದಲ್ಲಿ ನರ್ತಕಿ ರಾಜ ಕನ್ಯೆಯೊಡನೆ ಹಿಂದಿನ ರಾತ್ರಿ ನಡೆಯಬೇಕಾಗಿದ್ದ ಸಮಾಗಮ' ಮರುದಿನ ರಾತ್ರಿ ಚಾಲುಕ್ಯ ಅರಮನೆಯಲ್ಲಿ ರಾಣಿ ಕಾಮೇಶ್ವರಿಯೊಡನೆ ನಡೆಯಿತು. ಆಮೇಲೆ ಕುಮಾರ ಪ್ರೇಮಾರ್ಣವ ಹುಟ್ಟಿದ್ದು,” -ಎಂದು ಕರ್ಣದೇವನು ಮುಗಿಸಿದನು.

ಕೇಳುತ್ತ ಮೌನವಾಗಿ ಕುಳಿತಿದ್ದ ಅಗ್ಗಳನು ಪಾನಶಾಲೆಯಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ ? ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದನು. ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶಕ್ಕಾಗಿ ಕಾಯುತ್ತ ಅವನ ಮನಸ್ಸಿನ ಕಳವಳವನ್ನು ಮುಚ್ಚಿಡುವ ಸರಳ ಕಂಠದಿಂದ,

“ರಾಜಾಂತಃಪುರಕ್ಕೆ ಸಹಜವಾದ ಈ ಹಗಲು ಹಾದರದ ಕಥೆಯನ್ನು