ಪುಟ:ಕ್ರಾಂತಿ ಕಲ್ಯಾಣ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೮

ಕ್ರಾಂತಿ ಕಲ್ಯಾಣ

ಸೇತುವೆಯಡಿಯಲ್ಲಿ !” ಎಂದನು.

“ರಾಣಿ ನನ್ನನ್ನು ವಂಚಿಸಿದಳು, ಅಗ್ಗಳ. ನಾನು ಅಷ್ಟೊಂದು ಕುಡಿದದ್ದು ಮೊದಲ ತಪ್ಪು. ದೀಪ ಆರಿಸಲು ಒಪ್ಪಿದ್ದು ಎರಡನೆಯ ತಪ್ಪು. ಪಾರ್ಶ್ವದ ಕೊಠಡಿಗೆ ಹೋಗಲು ಅವಕಾಶ ಕೊಟ್ಟದ್ದು ಮೂರನೆಯ ತಪ್ಪು. ಎಲ್ಲವೂ ನನ್ನ ಅವಿವೇಕದ ಫಲ,” -ಎಂದು ವಿಷಣ್ಣನಾಗಿ ನುಡಿದನು ಕರ್ಣದೇವ. “ಇದೆಲ್ಲ ನಿಮ್ಮ ಜಾತಕ ಫಲ ಕರ್ಣದೇವರಸರೆ,” -ಅಗ್ಗಳನ್ನು ಸಮಾಧಾನ ಹೇಳಿದನು.

"ಅಂದರೆ?” -ಅಜ್ಞಾನ ರೂಪ ತಳೆದಿತ್ತು ಕರ್ಣದೇವನ ದೃಷ್ಟಿಯಲ್ಲಿ.

“ಅಂದರೆ ನಿಮ್ಮ ಜನ್ಮದೋಷ. ಹುಟ್ಟು ಬುದಕಿನ ಬೇರು ಎಂಬ ನಾಣ್ಣುಡಿ ಕೇಳಿಲ್ಲವೆ ನೀವು ?”

“ನನಗೆ ಅರ್ಥವಾಗಲಿಲ್ಲ.”
“ಉಪಕಥೆ ಕೇಳಿದರೆ ಅರ್ಥವಾಗುವುದು.”
“ಈಗ ನೀವು ಹೇಳಿದ್ದು ಉಪಕಥೆಯಲ್ಲವೆ?”
“ಅಲ್ಲ, ಅದು ಪ್ರಸ್ತಾವನೆ. ಈಗ ಕಥೆ ಹೇಳುತ್ತೇನೆ. ನೀವು ಕಾಲಂಜರ ದುರ್ಗದ ಹೆಸರು ಕೇಳಿಲ್ಲವೆ ?”
“ಕೇಳಿಲ್ಲ.”

“ಒಳ್ಳೆಯದೇ ಆಯಿತು. ನನ್ನ ಕಥೆ ಕೇಳಿದ ಮೇಲೆ ನೀವು ಯಾವಾಗಲೂ ಕಾಲಂಜರ ದುರ್ಗದ ಹೆಸರು ಮರೆಯುವುದಿಲ್ಲ.” -ಎಂದು ಪ್ರಾರಂಭಿಸಿ ಅಗ್ಗಳನು ಹೇಳಿದನು- “ಹಿಂದೆ ಉತ್ತರಾಪಥದಲ್ಲಿ ಕಾಲಂಜರ ದುರ್ಗವೆಂಬ ರಾಜ್ಯವಿತ್ತು. ಅದರ ಅರಸು ವೀರ ಕೃತಿಯನಾದರೂ ನರಭಕ್ಷಕ. ಅವನು ಸಾಮಂತ ಅಧಿಕಾರಿಯಲ್ಲ, ಬಡ್ಡಿಗೆ ಹಣ ಕೊಟ್ಟು ಸುಖಜೀವನ ನಡೆಸುವ ಶ್ರೀಮಂತನಲ್ಲ, ರಾಜಭಟನಲ್ಲ, ಗಣಿಕಾಗೃಹ ನಡೆಸುವ ದಳ್ಳಾಳಿಯೂ ಅಲ್ಲ. ಆದರೂ ಅವನಿಗೆ ನರಮಾಂಸದ ರುಚಿ ಹತ್ತಿದ್ದು ಹೇಗೆ ಎಂಬುದೊಂದು ಚಿದಂಬರ ರಹಸ್ಯ.

“ಅವನಿಗೊಬ್ಬ ಬ್ರಾಹ್ಮಣ ಮಹಿಷಿ ಇದ್ದಳು. ಅಂದರೆ ಅವನು ಬ್ರಾಹ್ಮಣ ತರುಣಿಯೊಬ್ಬಳನ್ನು ಬಲಾತ್ಕಾರದಿಂದ ಹಿಡಿದು ತಂದು ಮಹಿಷಿ ಪದವಿಗೇರಿಸಿದ್ದನು. ಹಗಲಿರುಳೂ ಅವಳಿಗೆ ಒಂದೇ ಚಿಂತೆ, ಈ ನರಭಕ್ಷಕ ಪತಿಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು.

“ರಾಜ್ಯದ ಮಂತ್ರಿ ಸಾಮಂತ ಸೇನಾಪತಿಗಳ ಕಾಲವೆಲ್ಲ ಆಡಳಿತದ ಹೆಸರಿನಲ್ಲಿ ಸುಲಿಗೆ ಸೂರೆ ದರೋಡೆಗಳನ್ನು ನಡೆಸಿ ಸ್ವಂತ ಭಂಡಾರಗಳನ್ನು ತುಂಬಿಕೊಳ್ಳುವುದರಲ್ಲಿ ಕಳೆದುಹೋಗುತ್ತಿತ್ತು. ಅರಸನನ್ನು ನೋಡಿ ಮಂತ್ರಾಲೋಚನೆ