ಪುಟ:ಕ್ರಾಂತಿ ಕಲ್ಯಾಣ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೦

ಕ್ರಾಂತಿ ಕಲ್ಯಾಣ

ಶ್ಲೋಕಾರ್ಥಗಳನ್ನು ಉದಾಹರಿಸಿದಾಗ ಕಾಲಂಜರದ ಉದ್ಧಾರಕ್ಕಾಗಿ ಪರಶಿವನೇ
ಅವತಾರ ಮಾಡಿದನೆಂದು ಭಾವಿಸಿದರು.ಕರ್ಣಕರ್ಣೆಯಾಗಿ ವಾಸ್ತವ ವಿಚಾರಗಳನ್ನು
ತಿಳಿದಿದ್ದ ಮಂತ್ರಿವರ್ಗದವರೂ, 'ನಾವು ಮಾಡಬೇಕಾಗಿದ್ದ ಕಾರ್ಯವನ್ನು ರಾಜ
ಮಹಿಷಿ ಈ ನಾಪಿತನಿಂದ ಮಾಡಿಸಿದಳು. ಯಾರಾದರೇನು ? ನಾವು ಹೇಳಿದಂತೆ
ಕೇಳಿಕೊಂಡು, ನಮ್ಮ ಪ್ರಜಾಪೀಡಾಕಾರ್ಯಗಳಿಗೆ ಅಡ್ಡಿಬರದಿರುವ ರಾಜನು
ನಮಗೆ ಬೇಕು. ಅದಕ್ಕೆ ಈ ನಾಪಿತ ಸರಿಯಾಗಿದ್ದಾನೆ' ಎಂದು ಬಗೆದು ತಟಸ್ಥರಾದರು.
ಮುಂದೆ ರಾಣಿಗೆ ಮಕ್ಕಳು ಮೊಮ್ಮಕ್ಕಳಾಗಿ ವಂಶವೃಕ್ಷ ಬೆಳೆದು ಕಾಲಂಜರದಿಂದ
ಕರ್ಣಾಟಕದವರೆಗೆ ಹರಡಿತು.
“ಅಜ್ಞಾತ ನಾಪಿತನೊಬ್ಬನು ತನ್ನ ಕ್ಷೌರಕತ್ತಿಯ ಬಲದಿಂದ ರಾಜನಾದ್ದರಿಂದ
ಆ ರಾಜವಂಶದ ಹೆಸರು ಕಟಚೂರಿ, ಕಲಚೂರ್ಯ ಎಂದಾಯಿತು. ಆ ನಾಪಿತ
ಮಶದಲ್ಲಿ ಹುಟ್ಟಿದ ನೀನು ರಾಣಿಗೂ ದಾಸಿಗೂ ಇರುವ ಅಂತರವನ್ನು ತಿಳಿಯುವುದು
ಹೇಗೆ ಸಾಧ್ಯ ? ಧಿಕ್ಕಾರ ನಿನ್ನ ಅವಿವೇಕಕ್ಕೆ !”
-ಎಂದು ಅಗ್ಗಳನು ಸುಖಾಸನದಿಂದೆದ್ದು ಬಟ್ಟಲಲ್ಲಿ ತುಂಬಿಟ್ಟಿದ್ದ ಮಧುವನ್ನು
ರಪ್ಪನೆ ಕರ್ಣದೇವನ ಮುಖಕ್ಕೆರಚಿ ಒಂದೇ ಹಾರಿಗೆ ಮೊಗಶಾಲೆಯನ್ನು ಸೇರಿ,
ಕೈಪಿಡಿಯ ಮೇಲೆ ನಿಂತು ಪಾರಿಜಾತದ ಕೊಂಬೆಗೆ ಹಾರಿದನು. ಕೊಂಬೆ ಕಟ
ಕಟ ಶಬ್ದ ಮಾಡಿ ಕೆಳಗೆ ಬಾಗಿತು. ಅಗ್ಗಳನು ಕೆಳಗೆ ಧುಮುಕಿ ಉದ್ಯಾನದ
ಅಂಚಿನಲ್ಲಿದ್ದ ಪೊದರುಗಳ ನಡುವೆ ಮರೆಯಾದನು. ಕೆಲವೇ ಕ್ಷಣದಲ್ಲಿ ಇಷ್ಟೆಲ್ಲ
ನಡೆದುಹೋಯಿತು.
ಮರಿಗಳನ್ನು ಕಳೆದುಕೊಂಡ ಕಿರುಬದಂತೆ ವಿಕಟವಾಗಿ ಅರಚಿದನು
ಕರ್ಣದೇವ, ಕೂಗು ಕೇಳಿ ಭಟರು ಓಡಿಬಂದರು. ಹೀಗಾಗುವುದೆಂದು ಮೊದಲೇ
ತಿಳಿದಿದ್ದ ದಾಸಿ ಮಧುವನ್ನು ತಂದುಕೊಟ್ಟಾಗ ಬಾಗಿಲ ಹತ್ತಿರ ಅಲ್ಲಲ್ಲಿ ಚೆಲ್ಲಿದ್ದಳು.
ಓಡಿಬಂದ ಮೊದಲ ಭಟನು ಅಂತಹ ಒಂದೆಡೆಯಲ್ಲಿ ಜಾರಿಬಿದ್ದನು. ಎರಡನೆಯ
ಭಟನಿಗೆ ಅದೇ ಗತಿಯಾಯಿತು. ಬಿದ್ದು ಎದ್ದು ಅವರು ಎದುರಿಗೆ ನಿಂತಾಗ
ಕರ್ಣದೇವನು ಕಣ್ಣು ಮುಖಗಳಿಗೆ ಬಿದ್ದಿದ್ದ ಮಧುವನ್ನು ಒರೆಸಿಕೊಳ್ಳುತ್ತ ಹಿಡಿಸಲಾಗದ
ಕ್ರೋಧದಿಂದ ಹೂಂಕರಿಸಿ ಮೊಗಶಾಲೆಯ ಕಡೆ ಕೈ ತೋರಿಸಿದನು.
ಭಟರು ತಿಳಿದರು, ಯಾರನ್ನು ಹಿಡಿಯಲು ಪಾನಶಾಲೆಯ ಸುತ್ತ ಕಾವಲಿದ್ದೆವೋ
ಆ ವ್ಯಕ್ತಿ ಮೊಗಶಾಲೆಯಿಂದ ಕೆಳಗೆ ಹಾರಿ ತಪ್ಪಿಸಿಕೊಂಡನೆಂದು
. ಭಟ ನಾಯಕನು ಕೈಪಿಡಿಯ ಬಳಿ ನಿಂತು ನೋಡಿದನು. ರಾಜೋದ್ಯಾನ ನಿರ್ಜನವಾಗಿತ್ತು. ಆಗತಾನೆ ಉದಯಿಸುತ್ತಿದ್ದ ನವಮಿಯ ಚಂದ್ರನ ಅಲ್ಪ ಕಾಂತಿ