ಪುಟ:ಕ್ರಾಂತಿ ಕಲ್ಯಾಣ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೬೩


ಅಗ್ಗಳನು ಹೊದರ ಮರೆಯಲ್ಲಿ ಅಡಗಿ ಕುಳಿತಿದ್ದಂತೆ ಇರುಳ ಮೊದಲ ಜಾಮ ಮುಗಿದ ಗಂಟೆ ಹೊಡೆಯಿತು, ಮೊಗಶಾಲೆ ವಾತಾಯನಗಳ ಬೆಳಕುಗಳು ಒಂದೊಂದಾಗಿ ಆರಿದವು. ಪಾನಶಾಲೆಯ ದೀಪಗಳು ಮಾತ್ರ ಉರಿಯುತ್ತಿದ್ದವು. ಕರ್ಣದೇವನ ಏಕಾಂತ ಪಾನಗೋಷ್ಠಿ ಇನ್ನೂ ನಡೆಯುತ್ತಿದೆಯೆಂದು ಅಗ್ಗಳನು ತಿಳಿದನು.

ಆಗ ಅರಮನೆಯ ಮಹಾದ್ವಾರದಲ್ಲಿ ತುತ್ತೂರಿಯ ಸದ್ದಾಗಿ ಎಂಟು ಜನ ಭಟರ ಒಂದು ಸಣ್ಣ ಪಡೆ ಆ ಪಾರ್ಶ್ವಕ್ಕೆ ಬಂದಿತು. ಕೆಳ ಅಂತಸ್ತಿನ ಮೊಗಶಾಲೆಗಳಲ್ಲಿ ಭಟರು ಪಹರೆಗೆ ನಿಂತರು. ಇರುಳು ಮೂರು ಜಾಮಗಳಲ್ಲಿ ಅರಮನೆಯ ಸುತ್ತ ಪಹರೆ ಕೊಡುವುದು ಅಲ್ಲಿನ ಪದ್ಧತಿಯಾಗಿತ್ತು. ಮೊಗಶಾಲೆಯನ್ನೇರಿ ರಾಣಿಯ ಬಿಡಾರವನ್ನು ಪ್ರವೇಶಿಸುವ ಅಗ್ಗಳನ ಹಂಚಿಕೆ ಇದರಿಂದ ಕುಸಿಯಿತು. ನಿರಾಶೆಯ ದಗ್ಧದೃಷ್ಟಿಯಿಂದ ಮೊಗಶಾಲೆಗಳತ್ತ ನೋಡುತ್ತ ಅವನು ಹೊದರಿನಡಿಯ ನೆಲದ ಮೇಲೆ ಮಲಗಿದನು.

ಸುಮಾರು ಎರಡು ಗಳಿಗೆ ಕಳೆದಿರಬಹುದು. ಆಗ ಹೆಂಗಸೊಬ್ಬಳು ಮಹಾದ್ವಾರದ ಕಡೆಯ ಎರಡನೆಯ ಮೊಗಶಾಲೆಗೆ ಬಂದು, ಕೈಪಿಡಿಯ ಕಂಬಕ್ಕೆ ಒರಗಿ, ಶೂಲದ ಮರವಿದ್ದ ಕಡೆಗೆ ಮುಖ ತಿರುಗಿಸಿ ನೋಡುತ್ತ ನಿಂತಳು. ನವಮಿಯ ಚಂದ್ರನ ಕ್ಷೀಣ ಕಿರಣಗಳು ಶೂಲದ ಮರದ ಮೇಲೆ ಬಿದ್ದು, ಜೋತಾಡುತ್ತಿದ್ದ ನಾಡಕವಿಯ ದೇಹ ಮಸಕು ಮಸಕಾಗಿ ಕಂಡಿತು. ಹೆಂಗಸು ತಟ್ಟನೆ ಹಿಂದಕ್ಕೆ ಸರಿದು ಮೊಗಶಾಲೆಯ ಕಂಬಗಳ ನಡುವೆ ಮರೆಯಾದಳು.

ಅಗ್ಗಳನು ಚಮತ್ಕೃತನಾದನು. ಹೆಂಗಸು ರಾಣಿ ಕಾಮೇಶ್ವರಿಯೇ ಆಗಿರಬೇಕು. ಆ ದಿನ ದರ್ಶನಕ್ಕೆ ಹೋಗಿದ್ದಾಗ ನಡೆದ ಮಾತುಕಥೆಗಳನ್ನು ರಾಣಿ ಇನ್ನೂ ಮರೆತಿಲ್ಲ. ಬಿಡಾರದ ಏಕಾಂತದಲ್ಲಿ ರಾಣಿ ಚಿಂತಿಸುತ್ತ ಕುಳಿತಾಗ ಶೂಲದ ಮರದ ನೆನಪಾಗಿ ಮೊಗಶಾಲೆಗೆ ಬಂದದ್ದು ಅಸಂಭವವಲ್ಲ. ದಾಸಿಯರು ಕರೆದದ್ದನ್ನು ಕೇಳಿ ಅವಳು ತಟ್ಟನೆ ಒಳಗೆ ಹೋಗಿರಬೇಕು.

ಎರಡನೆಯ ಪ್ರಹರದ ಘಂಟೆ ಹೊಡೆದಾಗ ಎಲ್ಲೆಡೆ ನಿಶ್ಯಬ್ದ. ಪಾನಶಾಲೆಯ ದೀಪಗಳು ಆರಿ ಸುಮಾರು ಹೊತ್ತಾಗಿತ್ತು. ರಾಣಿಯ ಬಿಡಾರದಲ್ಲಿ ಮಾತ್ರ ಕೆಲವು ದೀಪಗಳು ಮಸಕಾಗಿ ಉರಿಯುತ್ತಿದ್ದವು. ಹೊರಗೆ ಪ್ರಹರಿಗಳು ಶತಪಥ ತಿರುಗುತ್ತಿದ್ದರು. ಅವರು ಪೊದರುಗಳ ಹತ್ತಿರ ಬರುವುದಿಲ್ಲವೆಂದು ತಿಳಿದಮೇಲೆ ಅಗ್ಗಳನು ಮಲಗಿದ್ದಂತೆ ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿಗೆ ಅನುವಾದನು.

ಜೊಂಪು ಹತ್ತಿ ಮೂರನೆಯ ಜಾಮದ ಘಂಟೆ ಹೊಡೆದಾಗ ಅವನಿಗೆ