ಪುಟ:ಕ್ರಾಂತಿ ಕಲ್ಯಾಣ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೪

ಕ್ರಾಂತಿ ಕಲ್ಯಾಣ


ಎಚ್ಚರವಾಯಿತು. ಆಗಲೂ ಬಿಡಾರದಲ್ಲಿ ದೀಪಗಳು ಉರಿಯುತ್ತಿರುವುದನ್ನು ಕಂಡು ಅಗ್ಗಳನು, “ರಾಣಿಯ ಜಾಗರಣದ ಕಾರಣವೇನು ?” ಎಂದು ಚಿಂತಿಸಿದನು.

ಇನ್ನೆರಡು ಗಳಿಗೆ ಕಳೆದು ಪೂರ್ವ ದಿಗಂತದಲ್ಲಿ ಬೆಳಗಿನ ಕೆಂಜಾಯೆ ಹರಡುತ್ತಿದ್ದಂತೆ ಅರಮನೆಯ ಕೆಳಅಂತಸ್ತಿನಲ್ಲಿದ್ದ ಉಗ್ರಾಣ ಪಾಕಶಾಲೆಗಳಲ್ಲಿ ದೀಪಗಳು ಹೊತ್ತಿಸಲ್ಪಟ್ಟು ದಾಸ ದಾಸಿಯರ ತಿರುಗಾಟಕ್ಕೆ ಪ್ರಾರಂಭವಾಯಿತು. ಕಾವಲು ಭಟರು ಮೊಗಶಾಲೆಗಳಲ್ಲಿ ಕುಳಿತು ತೂಕಡಿಸುತ್ತ ಸರದಿ ಮುಗಿಸಿಕೊಂಡು ಮನೆಗಳಿಗೆ ಹೋಗಲು ಅನುವಾಗುತ್ತಿದ್ದರು.

ಅಗ್ಗಳನು ಎದ್ದುನಿಂತು ಜೊಂಪು ಹಿಡಿದಿದ್ದ ಕೈಕಾಲುಗಳನ್ನಾಡಿಸಿ ಬೆಳಕು ಹರಿಯುವ ಮೊದಲೇ ಹೊದರುಗಳ ಮರೆಯಲ್ಲಿ ರಾಜಮಾರ್ಗವನ್ನು ಹಾದು ನಗರವನ್ನು ಸೇರಲು ಅನುವಾಗುತ್ತಿದ್ದಾಗ ರಾಣಿಯ ಬಿಡಾರದ ಅಡಿಯಲ್ಲಿದ್ದ ಮೊಗಶಾಲೆಯ ಬಾಗಿಲಿಂದ ಹೆಂಗಸೊಬ್ಬಳು ಐದಾರು ವರ್ಷಗಳ ಬಾಲಕನೊಬ್ಬನ ಕೈಹಿಡಿದು ಉದ್ಯಾನಕ್ಕೆ ಬರುತ್ತಿರುವುದನ್ನು ಕಂಡನು. ಅವರ ಉಡಿಗೆ ಅರಮನೆಯ ದಾಸಿಯರಿಗೆ ತಕ್ಕಂತಿದ್ದವು. ಊಳಿಗದವರೆಂದು ಕಾವಲಿದ್ದ ಭಟನು ಅವರನ್ನು ತಡೆಯಲಿಲ್ಲ.

ಹೆಂಗಸಿನ ಮೈ ನಿಲುವು, ನಡಿಗೆ, ತನಗೆ ಎಲ್ಲಿಯೋ ಪರಿಚಿತವೆಂದು ಅಗ್ಗಳನು ಭಾವಿಸಿದನು. ಅವರು ಉದ್ಯಾನವನ್ನು ದಾಟಿ ರಾಜಮಾರ್ಗದಿಂದ ನಗರಕ್ಕೆ ಹೋಗುತ್ತಿದ್ದಂತೆ ಅಗ್ಗಳನು ತಾನು ವಿಪತ್ತಿನಲ್ಲಿರುವೆನೆಂಬುದನ್ನು ಮರೆತು, ಪೊದರ ಮರೆಯಿಂದ ಹೊರಗೆ ಬಂದು ಅವಳನ್ನು ಹಿಂಬಾಲಿಸಿದನು.

***

“ರಾಜ್ಯಕೋಶ ಅರಸೊತ್ತಿಗೆಗಳನ್ನು ಪಗಡೆಯಾಟದಲ್ಲಿ ಸೋಲುವುದು, ಗೆಲ್ಲುವುದು ಪುರಾಣಯುಗದಲ್ಲಿ ಸತ್ಯಘಟನೆಗಳಾಗಿರಬಹುದು. ಕಥೆ ಕಾವ್ಯಗಳಲ್ಲಿ ಅದರ ವರ್ಣನೆಯನ್ನು ಓದುತ್ತೇವೆ. ಆದರೆ ವಾಸ್ತವ ಜೀವನದಲ್ಲಿ ಹಾಗಾಗುವುದು ಸಾಧ್ಯವಲ್ಲ.” -ಎಂದು ತನಗೆ ತಾನೆ ಹೇಳಿಕೊಳ್ಳುತ್ತ ರಾಣಿ ಕಾಮೇಶ್ವರಿ ಬಿಡಾರವನ್ನು ಸೇರಿದಳು.

“ಹಾಗಾದರೆ ನಾನು ಪಗಡೆಯಾಟದಲ್ಲಿ ಬಿಜ್ಜಳನನ್ನು ಸೋಲಿಸಿ ರಾಜ್ಯಕೋಶಗಳನ್ನು ಗೆದ್ದದ್ದು ನಿಜವಲ್ಲವೆ?” ಎಂದು ಪ್ರಶ್ನಿಸಿತು. ಅವಳ ಅಂತರಂಗದ ಇನ್ನೊಂದು ಮುಖ.

“ನನ್ನನ್ನು ವಂಚಿಸಲು ಬಿಜ್ಜಳನು ಹೂಡಿದ ತಂತ್ರ ಅದು. ಇದನ್ನು ತಿಳಿದೇ ನಾನು, ಸರ್ವಾಧಿಕಾರಿಯ ರಾಜಮಕುಟ ಮುದ್ರೆಯುಂಗುರಗಳನ್ನು ಅವನಿಗೇ