ಪುಟ:ಕ್ರಾಂತಿ ಕಲ್ಯಾಣ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೬೫


ಹಿಂದಿರುಗಿ ಕೊಟ್ಟದ್ದು. ನುಂಗಲಾರದ ತುತ್ತನ್ನು ನುಂಗಲು ಪ್ರಯತ್ನಿಸಿದಾಗ ತುತ್ತು ಗಂಟಲಲ್ಲಿ ಸಿಲುಕಿ ಪ್ರಾಣಾಪಾಯ ಉಂಟಾಗಬಹುದು. ಅಂತಹ ತಿಳಿಗೇಡಿ ಹೆಣ್ಣಲ್ಲ ನಾನು,” ಎಂದು ಉತ್ತರಿಸಿತು ರಾಣಿಯ ಮೊದಲ ಮುಖ.

“ಹಾಗಾದರೆ ನೀನು ಬೆಡಗು ಬಿನ್ನಾಣಗಳಿಂದ ಬಿಜ್ಜಳನ ಮೇಲೆ ಮೋಹದ ಬಲೆ ಬೀಸಿದೆಯೇಕೆ ?”

“ಬೆಡಗು ಬಿನ್ನಾಣಗಳು ಹೆಣ್ಣಿಗೆ ಸಹಜವಾದ ಅಸ್ತ್ರಗಳು. ಇಚ್ಛೆ ಇರಲಿ, ಇಲ್ಲದಿರಲಿ, ಸಮಯಾಸಮಯಗಳಲ್ಲಿ ಅವುಗಳ ಆಸ್ಫಾಲನೆ ನಡೆಯುವುದು. ಬೆಂಕಿಯು ಸುಡುವಂತೆ, ಗಾಳಿ ಬೀಸುವಂತೆ, ಸೂರ್ಯನು ಬೆಳಗುವಂತೆ ಅದೊಂದು ಸ್ವಾಭಾವಿಕ ಕಾರ್ಯ. ಅದರಲ್ಲಿ ನನಗಾವ ಹೆಚ್ಚಿನ ಉದ್ದೇಶವೂ ಇರಲಿಲ್ಲ.”

“ಇಚ್ಛೆಯಿರಲಿ, ಇಲ್ಲದಿರಲಿ, ನಿನ್ನ ವರ್ತನೆ ಬಿಜ್ಜಳನ ಕಾಮಾಸಕ್ತಿಯನ್ನು ಕೆರಳಿಸಿದೆ. ಅದರ ದುಷ್ಟ ಫಲ ನಿನ್ನನ್ನು ಬಿಡುವುದಿಲ್ಲ.”

“ಈಗ ಬಿಜ್ಜಳನು ನನ್ನ ಸರ್ವಾಧಿಕಾರಿ, ನನ್ನ ನೆಚ್ಚಿನ ಗರುಡ. ಅವನಿಂದ ನನಗಾವ ಭಯವೂ ಇರುವುದಿಲ್ಲ.”

“ಸರ್ವಾಧಿಕಾರಿ ನಿನ್ನನ್ನು ಮೋಸದಿಂದ ಸೆರೆ ಹಿಡಿಯಬಹುದು. ನೆಚ್ಚಿನ ಗರುಡ ಮೋಹದ ಗೆಳೆಯನಾಗಲು ಹವಣಿಸಬಹುದು. ನೀನು ವಿಪತ್ತಿನಲ್ಲಿ ಬಿದ್ದಿರುವೆ, ರಾಣಿ.”

“ಶಂಕಿಸುವುದು ನಿನ್ನ ಸ್ವಭಾವ, ನಿಶ್ಯಂಕೆಯಿಂದಿರುವುದು ನನ್ನ ಸ್ವಭಾವ. ನಾವಿಬ್ಬರೂ ಒಂದೇ ಮನಸ್ಸಿನ ಎರಡು ಮುಖಗಳು. ನಡೆಯಬೇಕಾದ ಕಾರ್ಯ ನಡೆದೇ ನಡೆಯುವುದು. ಶಂಕೆ ನಿಶ್ಯಂಕೆಗಳು ಅದನ್ನು ತಡೆಯಲಾರವು. ಅದಕ್ಕಾಗಿ ನಾವೇಕೆ ಹೋರಾಡಬೇಕು?*

ಎಂದು ಕಾಮೇಶ್ವರಿ ಅಂತರಂಗದ ತಳಮಳವನ್ನು ಕೊನೆಗಾಣಿಸಿ, ಸಭಾಂಗಣಕ್ಕಾಗಿ ಧರಿಸಿದ್ದ ಆಭರಣಗಳನ್ನು ತೆಗೆದಿಡುತ್ತಿದ್ದ ಉಷಾವತಿಯ ಕಡೆ ತಿರುಗಿ, “ಪ್ರೇಮಾರ್ಣವ ಏನು ಮಾಡುತ್ತಿದ್ದಾನೆ?” ಎಂದು ಕೇಳಿದಳು.

“ಆಗಲೆ ಊಟ ಮಾಡಿಸಿ ಮಲಗಿಸಿದೆ. ನಿದ್ರೆ ಮಾಡುತ್ತಿದ್ದಾನೆ.”
“ಅಗ್ಗಳದೇವರು ಬಂದಿದ್ದರೆ?”
“ನಿಮ್ಮ ಸಂಗಡ ಸಭಾಂಗಣಕ್ಕೆ ಹೋದವರು ಹಿಂದಿರುಗಲಿಲ್ಲ.”
ರಾಣಿ ಮೌನ.
“ಸಭಾಂಗಣದಲ್ಲಿ ಏನು ನಡೆಯಿತು, ರಾಣೀಜಿ ?”
“ಅದೊಂದು ದೊಡ್ಡ ಕಥೆ, ಉಷಾ. ನಾಳೆ ಎಲ್ಲವನ್ನೂ ಹೇಳುತ್ತೇನೆ. ಈಗ ಆರೋಗಣೆಗೆ ಸಿದ್ಧಪಡಿಸು.”