ಪುಟ:ಕ್ರಾಂತಿ ಕಲ್ಯಾಣ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ


ಬಾಂಧವರ ಓಣಿಯಲ್ಲಿ ನಡೆದ ಘಟನೆಗಳಿಂದ ತನ್ನಲ್ಲಿ ತಲೆದೋರಿದ್ದ ಅಶಾಂತಿ ವಿಷಣ್ಣತೆಗಳನ್ನು ಮರೆಯುವುದು ಅವನ ಉದ್ದೇಶವಾಗಿತ್ತು.

"ಓಡೆಯರು ನಿಮ್ಮನ್ನು ನೋಡಲು ಬಂದಿದ್ದಾರೆ,” ಎಂದು ಕಾರ್ಯಕರ್ತನು ನುಡಿದಾಗ ಅಗ್ಗಳನು ತಲೆಯೆತ್ತಿ, ಧರ್ಮಾಧಿಕರಣದ ಹಿರಿಯ ಅಧಿಕಾರಿಯಂತೆ ಜರತಾರಿಯ ಶಾಲು ಹೊದೆದು, ಉಷ್ಣೀಷ ಧರಿಸಿದ್ದ ಪ್ರೌಢ ವಯಸ್ಸಿನ ಪುರುಷನೊಬ್ಬನು ಎದುರಿಗೆ ನಿಂತಿರುವುದನ್ನು ಕಂಡನು. ಅವನು ರಾಜಪುರೋಹಿತ ನಾರಣಕ್ರಮಿತನೆಂದು ತಿಳಿದಾಗ ಸಂಭ್ರಮದಿಂದ ಎದ್ದು ನಮಸ್ಕಾರ ಮಾಡಿ,

"ದಯಮಾಡಿಸಬೇಕು ಧರ್ಮಾಧಿಕಾರಿಗಳು. ಈ ದರಿದ್ರ ಕವಿಯ ಬಿಡಾರಕ್ಕೆ ರಾಜ್ಯದ ಉನ್ನತಾಧಿಕಾರಿಯೊಬ್ಬರು ಭೇಟಿಗಾಗಿ ಬರುವರೆಂದು ನಾನು ಭಾವಿಸಿರಲಿಲ್ಲ" ಎಂದನು.

"ಚಾಲುಕ್ಯ ಮಹಾರಾಣಿಯ ಮನೆಹೆಗ್ಗಡೆ ದರಿದ್ರ ಕವಿಯಾದರೂ ಅವರ ಬಿಡಾರ ರಾಜನಿವಾಸವಾಗುವುದು, ಅಗ್ಗಳದೇವರಸರೆ,” ಎಂದು ನುಡಿದು ಕ್ರಮಿತನು ಅಗ್ಗಳನು ತೋರಿಸಿದ ಭದ್ರಾಸನದ ಮೇಲೆ ಕುಳಿತಾಗ ಕಾರ್ಯಕರ್ತನು ತನ್ನ ಕರ್ತವ್ಯ ಮುಗಿಯಿತೆಂದು ತಿಳಿದು, ಕೈಯೆತ್ತಿ ನಮಿಸಿ, ರಾಜಸಭೆಯ ಶಿಸ್ತಿನಿಂದ ಹಿಂದಕ್ಕೆ ನಡೆಯುತ್ತಾ ಬಿಡಾರದಿಂದ ಹೊರಗೆ ಹೋದನು.

"ಒಡೆಯರೊಡನೆ ನಮ್ಮ ಮಾತುಕಥೆಗಳಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಿರಿ, ಕಾರ್ಯಕರ್ತರೆ,” ಎಂದು ಕೂಗಿ ಹೇಳಲು ಅಗ್ಗಳನು ಮರೆಯಲಿಲ್ಲ.

ಆಮೇಲೆ ಅವನು ಬಿಡಾರದ ಬಾಗಿಲನ್ನು ಮುಚ್ಚಿ ಕ್ರಮಿತನ ಎದುರಿಗೆ ನಿಂತು, "ದೇವಗಿರಿಯ ಸಂದರ್ಶನಾನಂತರ ಇಷ್ಟು ಬೇಗ ಪುನಃ ನಿಮ್ಮನ್ನು ನೋಡುವನೆಂದು ನಾನು ಭಾವಿಸಿರಲಿಲ್ಲ.” ಎಂದನು.

ಕ್ರಮಿತನು ಕೂಡಲೇ ಉತ್ತರ ಕೊಡಲಿಲ್ಲ. ಅಗ್ಗಳನು ಓದುತ್ತಿದ್ದ ಹೊತ್ತಿಗೆಯ ಪುಟಗಳನ್ನು ತಿರುವಿಹಾಕುತ್ತ ತುಸುಹೊತ್ತು ಸುಮ್ಮನಿದ್ದು ಬಳಿಕ ಅವನು,

"ಶರಣರ ಆ ಬಯಲಾಟದಿಂದ ಕದಡಿದ ನಿಮ್ಮ ಮನಃಶ್ಯಾಂತಿ ಭರ್ತೃಹರಿಯ ಸುಭಾಷಿತದಿಂದ ನವಚೈತನ್ಯ ಪಡೆದಂತಿದೆ ಅಲ್ಲವೆ ಅಗ್ಗಳದೇವರಸರೆ?” ಎಂದನು.

ಅಗ್ಗಳನ ಮುಖದಲ್ಲಿ ಕಿರುನಗೆಯೊಂದು ಮೂಡಿ ಮರೆಯಾಯಿತು. "ಸುಭಾಷಿತಗಳ ಮೂಲೋದ್ದೇಶವೆಂದರೆ ನೀತಿಬೋಧೆಯೊಡನೆ ಮನಶ್ಯಾಂತಿಯನ್ನು ಕೊಡುವುದೇ ಅಲ್ಲವೆ? ಭರ್ತೃಹರಿಯ ಒಂದು ಪದ್ಯ ನನ್ನ ಮನಸ್ಸನ್ನು ಸೆಳೆಯಿತು. ಅದರ ಅರ್ಥವನ್ನು ಚಿಂತಿಸುತ್ತ ಕುಳಿತಿದ್ದೆ. ಅಷ್ಟರಲ್ಲಿ ನೀವು ಬಂದಿರಿ,” ಎಂದನು.

"ಯಾವುದು ಆ ಪದ್ಯ?"