ಪುಟ:ಕ್ರಾಂತಿ ಕಲ್ಯಾಣ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೬೯

ತಂದರು. ಮುಂದೆ ಅದು ಕುಂತಳ ಕೇರಳ ರಾಜ್ಯಗಳಿಗೆ ಹರಡಿತು. ಅಂತಃಪುರವಾಸಿನಿಯಾದ ಹೆಣ್ಣು ಯಾರನ್ನು ಗರುಡನನ್ನಾಗಿ ಬಯಸುವಳೋ ಆ ಪುರುಷನಿಗೆ, ಕನ್ಯೆಯಾಗಿದ್ದರೆ ಕೈಕಡಗಗಳನ್ನೂ, ವಿವಾಹಿತೆಯೋ ವಿದವೆಯೋ ಆಗಿದ್ದರೆ ಕಂಚುಕ ಚಲ್ಲಣಗಳನ್ನೂ ಉಡುಗೊರೆಯಾಗಿ ಕಳುಹಿಸುವಳು. ಆಹ್ವಾನ ಪಡೆದ ಪುರುಷನು, ಕಳುಹಿಸಿದವಳು ಕನ್ಯೆಯಾಗುದ್ದರೆ ಮದುವೆಯಾಗಿ ಮನೆ ತುಂಬಿಸಿಕೊಳ್ಳುವನು. ಕಳುಹಿಸಿದವಳು ವಿವಾಹಿತೆಯೋ ಪತಿಹೀನೆಯೋ ಆಗಿದ್ದರೆ ರಹಸ್ಯವಾಗಿ ಅವಳನ್ನು ಕಂಡು ಆತ್ಮಾರ್ಪಣ ಮಾಡಿಕೊಳ್ಳುವನು. ಅಂದಿನಿಂದ ಅವರ ಗೆಳೆತನದ ಪ್ರಾರಂಭ. ಒಡತಿ ನಲುಮೆಯ ಅಧಿದೇವಿಯಾಗುವಳು, ಗರುಡ ಅವಳ ರಹಸ್ಯಪತಿಯಾಗುವನು," –ಎಂದು ಬಿಜ್ಜಳನು ತಟ್ಟನೆ ಕಾಮೇಶ್ವರಿಯ ಕೈಹಿಡಿದನು.

"ಇದೆಂತಹ ದುಡುಕುತನ! ಬಿಡಿರಿ, ಬಿಡಿರಿ, ನನ್ನನ್ನು!" ಎಂದು ಕಾಮೇಶ್ವರಿ ಒದರಿದಳು.

ಎರಗಿ ಬಂದ ಗರುಡ ಹಕ್ಕಿ ಅರಗಿಣಿಯನ್ನು ಎತ್ತುವಂತೆ ಬಿಜ್ಜಳನು ತನ್ನೆರಡು ತೋಳುಗಳಿಂದ ಕಾಮೇಶ್ವರಿಯನ್ನು ಎತ್ತಿಕೊಂಡು ಬಿಡಾರದ ಮುಚ್ಚು ದಾರಿಯಲ್ಲಿ ನಡೆದನು.

ಹೆಬ್ಬುಲಿಗೆ ಸಿಕ್ಕ ಎಳೆಗರುವಿನಂತೆ ಕಾಮೇಶ್ವರಿ ಮೂರ್ಛಿತೆಯಾದಳು.

ಪುನಃ ಅವಳು ಎಚ್ಚೆತ್ತಾಗ ಯಾವುದೋ ಅಪರಿಚಿತ ವಾಸಗೃಹದಲ್ಲಿ, ಹಂಸ ತೂಲಿಕೆಯ ಮೃದುವಾದ ಹಾಸಿಗೆಯ ಮೇಲೆ, ಬಿಜ್ಜಳನ ತೋಳಸೆರೆಯಲ್ಲಿ ನಗ್ನೆಯಾಗಿ ಮಲಗಿದ್ದಳು. ತೈಲಾಧಾರಗಳಲ್ಲಿ ದೀಪಗಳು ಉರಿಯುತ್ತಿದ್ದವು. ಹೂಗಳ ಪರಿಮಳದಿಂದ ಭಾರವಾದ ಗಾಳಿ ಮಂದವಾಗಿ ಬೀಸುತ್ತಿತ್ತು. ಬಿಜ್ಜಳನು ಬೀಸಣಿಗೆಯಿಂದ ಗಾಳಿ ಹಾಕುತ್ತಿದ್ದನು.

ಕಾಮೇಶ್ವರಿ ಮೆಲ್ಲನೆ ಕಣ್ಣುಗಳನ್ನು ತೆರೆದು ವಾಸಗೃಹದ ಸುತ್ತ ನೋಡಿದಳು. ತನ್ನ ಸೀರೆ ಕುಪ್ಪುಸ ಎದೆಕಟ್ಟು ಚಲ್ಲಣಗಳು, ಬಿಜ್ಜಳನ ಪರಿತ್ಯಕ್ತ ಉಡುಗೆಗಳೊಡನೆ ಬೆರೆತು, ವಾಸಗೃಹದ ಮುಚ್ಚಿದ ಬಾಗಿಲಿಂದ ಮಂಚದವರೆಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

"ಎಷ್ಟೊಂದು ಆತುರ-ಆವೇಗ ಈ ಗರುಡನಿಗೆ?" ಎಂದು ಭಾವಿಸಿ ಕಾಮೇಶ್ವರಿ ಪುನಃ ಕಣ್ಣುಗಳನ್ನು ಮುಚ್ಚಿ ಚಿಂತಾಮಗ್ನೆಯಾದಳು: ಮೊಗಶಾಲೆಯಲ್ಲಿ ಬಿಜ್ಜಳನನ್ನು ಕಂಡಮೇಲೆ ಏನು ನಡೆಯಿತು ಎಂಬುದನ್ನು ಅನುಕ್ರಮವಾಗಿ ನೆನಪಿಸಿಕೊಳ್ಳಲು ಪ್ರಯತ್ನಿಸಿದಳು. ಗರುಡ ಸಂಪ್ರದಾಯವನ್ನು ಕುರಿತ ಬಿಜ್ಜಳನ