ಪುಟ:ಕ್ರಾಂತಿ ಕಲ್ಯಾಣ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೭೧

ಎಚ್ಚರಿಸಿತು.

"ನನ್ನ ರಾಣಿ! ನನ್ನ ಮೆಚ್ಚಿನ ರಾಣಿ!"
-ಎಂದು ಹಂಬಲದಿಂದ ನುಡಿದನು ಬಿಜ್ಜಳ.

"ಯುದ್ಧರಾಜಿಕಗಳಂತೆ ಭೋಗದಲ್ಲಿಯೂ ಚತುರರು ನೀವು. ನಿಮ್ಮ ತೋಳ ಸೆರೆಯಲ್ಲಿ ನಾನು ಪರವಶೆಯಾದೆ. ಮಾನವ ಲೋಕದ ದ್ವಂದ್ವಗಳೆಲ್ಲ ಅಳಿದು ನಿರ್ದೇಹಿಯಾದ ದೇವತೆಯೇ ಆಗಿದ್ದೆ!"

ಕಾಮೇಶ್ವರಿಯ ಮೆಚ್ಚಿನ ನುಡಿಗಳು ಬಿಜ್ಜಳನನ್ನು ಪರವಶಗೊಳಿಸಿದವು ಮತ್ತೆ ಮತ್ತೆ ಅವನ ತುಟಿಗಳು ಕಾಮೇಶ್ವರಿಯ ತುಟಿಗಳನ್ನರಸಿದವು. ಪ್ರತಿಚುಂಬನದ ನಿರೀಕ್ಷೆಯಿಂದ.

"ಒಡತಿಯ ಪ್ರಸಾದ ಪಡೆದು ಗರುಡನ ಅವಸರ ಆವೇಗಗಳು ಶಾಂತವಾಯಿತಲ್ಲವೇ? ಈಗ ನೀವು ಸರ್ವಾಧಿಕಾರಿ ದಂಡನಾಯಕರಾದರೆ ಒಳ್ಳೆಯದು."

-ತುಸುಹೊತ್ತಿನ ಮೇಲೆ ಕಾಮೇಶ್ವರಿ ಹೇಳಿದಳು.

ಬಿಜ್ಜಳನು ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ,

"ನನ್ನ ಅಪೇಕ್ಷೆಯೂ ಅದೇ, ರಾಣೀ. ಆಲಿಂಗನ ಚುಂಬನಗಳಲ್ಲಿ ಜಗತ್ತನ್ನು ಮರೆಯಲು ನಾವೇನು ನವ ತರುಣರೆ? ನಾಳೆ ವಿಜಯೋತ್ಸವದ ಮೆರವಣಿಗೆ ಮುಗಿದರೆ, ಮಂಗಳವೇಡೆಯೊಡನೆ ನನ್ನ ಸಂಬಂಧ ಕಳೆಯುತ್ತದೆ. ಏಕಾದಶಿಯಂದು ಕಲ್ಯಾಣಕ್ಕೆ ಪ್ರಯಣ. ಆಮೇಲೆ ಚಾಲುಕ್ಯ ರಾಜ್ಯದ ಪುನರ್ಘಟನೆಯ ಕಾರ್ಯಾರಂಭ." ಎಂದನು.

"ಚಾಲುಕ್ಯ ರಾಜ್ಯದ ಪುನರ್ಘಟನೆಯ ಅಗತ್ಯವೇನಿದೆ ಈಗ? ರಾಜ್ಯದ ಎಲ್ಲ ಕಡೆ ಸುವ್ಯವಸ್ಥೆ ನೆಲೆಸಿದೆಯಲ್ಲವೆ?"

ಕಾಮೇಶ್ವರಿಯ ಪ್ರಶ್ನೆ ಬಿಜ್ಜಳನನ್ನು ಕಾಮದ ಅವಸಾನದಿಂದ ಎಚ್ಚರಗೊಳಿಸಿತು. ಸೌಂದರ್ಯ ಸಮ್ಮೋಹಗಳ ಪ್ರತಿಮೂರ್ತಿಯಂತೆ ಪಾರ್ಶ್ವದಲ್ಲಿ ಪವಡಿಸಿದ್ದ ಪ್ರೇಯಸಿಯನ್ನು ಮರೆತು, ರಾಜಕಾರ್ಯ ಕಾರಣಗಳ ಕಂಕಾಲ ಎದುರಿಗೆ ನಿಂತು ವಿಕಟವಾಗಿ ನಗುತ್ತಿರುವಂತೆ ಭಾವಿಸಿ, ಕಳವಳದ ಕಾತರ ಕಂಠದಿಂದ ಅವನು,

"ಈಗ ಚಾಲುಕ್ಯರಾಜ್ಯ ಅಶಾಂತಿ ಆಂದೋಳನಗಳ ಅಗ್ನಿಸ್ತೂಪವಾಗಿದೆ, ರಾಣಿ. ಆ ಜ್ವಾಲಾಮುಖಿಯ ಮೇಲೆ ನಿಂತು ಸುಖಶಾಂತಿ ಸಮೃದ್ಧಿಗಳ ಕನಸು ಕಾಣುತ್ತಿದ್ದೇವೆ, ನಾವು. ದಕ್ಷಿಣದಲ್ಲಿ ದೋರಸಮುದ್ರದ ಹೋಯ್ಸಳರು, ಪೂರ್ವದಲ್ಲಿ ಗೋವೆಯ ಕದಂಬರಸರು, ಪಶ್ಚಿಮದಲ್ಲಿ ಓರಂಗಲ್ಲಿನ ಕಾಕತೀಯರು, ಚಾಲುಕ್ಯ ರಾಜ್ಯದ ಮೇಲೆ ಬೀಳಲು ಹವಣಿಸುತ್ತಿದ್ದಾರೆ. ಇವರಲ್ಲಿ ಹೊಯ್ಸಳ ಕದಂಬರು