ಪುಟ:ಕ್ರಾಂತಿ ಕಲ್ಯಾಣ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೨

ಕ್ರಾಂತಿ ಕಲ್ಯಾಣ


ಚಾಲುಕ್ಯ ಮಾಂಡಲಿಕರಾದರೂ ಸ್ವತಂತ್ರ ಅರಸರಾಗುವ ಹಂಬಲ ಅವರನ್ನು ತಪ್ಪು ದಾರಿಗೆಳೆದಿದೆ. ಈ ಪರಿಸ್ಥಿತಿಯಲ್ಲಿ ಸಾಮಂತಮನ್ನೆಯರ ಸ್ವಾಮಿನಿಷ್ಠೆ ಆಕಾಶ ಕುಸುಮದಂತೆ ತೋರಿಕೆಯ ವಸ್ತುವಾದರೆ ಆಶ್ಚರ್ಯವೇನಿದೆ ? ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ನಮಗೆ ವೈರಿಗಳು. ಇವರೆಲ್ಲರನ್ನೂ ಹತ್ತಿಕ್ಕಿದಾಗ ಮಾತ್ರ ರಾಜ್ಯ ಸುಭದ್ರವಾಗುವುದು,” ಎಂದನು.

“ಕಳೆದ ಕೆಲವು ವರ್ಷಗಳಿಂದ ಚಾಲುಕ್ಯರಾಜ್ಯ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆಯಲ್ಲವೆ? ನಿಮ್ಮ ನೇತೃತ್ವದಲ್ಲಿ ಮುಂದೆಯೂ ಆ ಕಾರ್ಯ ದಕ್ಷತೆಯಿಂದ ನಡೆಯುವುದು.”

“ನಾನು ಅದಕ್ಕಾಗಿ ಭಯಪಡುತ್ತಿಲ್ಲ, ರಾಣಿ. ನನ್ನ ಸಮಯ ಸಾಮರ್ಥ್ಯಗಳೆಲ್ಲವನ್ನೂ ಚಾಲುಕ್ಯ ರಾಜ್ಯದ ರಕ್ಷಣೆಗಾಗಿ ಕಳೆಯುವ ಉದ್ದೇಶದಿಂದ ಮಂಗಳವೇಡೆಯ ಮಂಡಲಾಧಿಕಾರವನ್ನು ಸೋಮೇಶ್ವರನಿಗೊಪ್ಪಿಸಿದೆ. ಸೈನ್ಯ ಸಹಾಯದಿಂದ ವಿರೋಧಿ ಸಾಮಂತರನ್ನು, ಮಾಂಡಲಿಕರನ್ನು ದಾರಿಗೆ ತರುವುದು ಸುಲಭ ಸಾಧ್ಯ. ಆದರೆ ಇನ್ನೊಂದು ವಿಚಾರ ನನಗೆ ತಲೆಶೂಲೆ ಆಗಿದೆ.

“ಯಾವುದು ಆ ವಿಚಾರ?

“ಶರಣಧರ್ಮದ ಹೆಸರಿನಲ್ಲಿ ಬಸವಣ್ಣನವರು ಪ್ರಾರಂಭಿಸಿರುವ ಆಂದೋಳನ ರಾಜ್ಯದ ಕೃಷಿಕ ಕಾರ್ಮಿಕರಲ್ಲಿ, ಶೆಟ್ಟಿ ಬಣಜಿಗ ಶ್ರೀಮಂತ ಮನ್ನೆಯರಲ್ಲಿ, ಕಾಳ್ಗಿಚ್ಚಿನಂತೆ ಹರಡುತ್ತಿದೆ ಅದು. ಇಂದು ವರ್ಣಧರ್ಮ ಜಾತಿಪಂಥಗಳನ್ನು ವಿರೋಧಿಸುತ್ತಿರುವ ಅವರು ನಾಳೆ ನಮ್ಮ ಪ್ರಭುತ್ವಾಧಿಕಾರವನ್ನು ಎದುರಿಸಲು ಸಿದ್ದರಾಗಬಹುದು. ಅನಾದಿಕಾಲದಿಂದ ಕ್ಷತ್ರಿಯರಿಗೆ ಮೀಸಲಾದ ಅರಸುತನ ಬೇರೆ ವರ್ಣಗಳ ಕೈಸೇರಿದರೆ ಚಾಲುಕ್ಯರಾಜ್ಯ ನಾಶವಾದಂತೆಯೇ?”

ಕಾಮೇಶ್ವರಿ ಕೆಲವು ಕ್ಷಣಗಳು ಯೋಚಿಸಿ, “ಏಕೆ? ಹಿಂದೆ ಬ್ರಾಹ್ಮಣ ವೈಶ್ಯಶೂದ್ರರು ಅರಸರಾಗಿ ರಾಜ್ಯವಾಳಲಿಲ್ಲವೆ?” ಎಂದಳು.

“ಅರಸರಾಗುವ ಮುನ್ನ ಅವರು ಯಾವ ವರ್ಣಕ್ಕೇ ಸೇರಿರಲಿ, ಅರಸರಾದ ಮೇಲೆ ಕ್ಷತ್ರಿಯರಾಗುವರು. ಮೌರ್ಯ ಗುಪ್ತ ಕದಂಬರು ಇದಕ್ಕೆ ನಿದರ್ಶನ.”

“ಹಾಗಾದರೆ ಈಗ ಒದಗಿರುವ ದುರಂತದಿಂದ ಚಾಲುಕ್ಯ ರಾಜ್ಯವನ್ನು ರಕ್ಷಿಸಲು ಯಾವ ಉಪಾಯವೂ ಇಲ್ಲವೆ?”

“ಇದೆ, ರಾಣಿ, ಶರಣಧರ್ಮದ ವಿನಾಶವೇ ಆ ಉಪಾಯ. ನಾನು ದೀರ್ಘ ಕಾಲ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಚಾಲುಕ್ಯ ರಾಜ್ಯದಲ್ಲಿ ಶರಣ ಧರ್ಮಕ್ಕೆ ಪ್ರೋತ್ಸಾಹ ಕೊಡುವ ಎಲ್ಲ ಮಠಮಂದಿರಗಳನ್ನು ನಾಶ ಮಾಡುವುದು