ಪುಟ:ಕ್ರಾಂತಿ ಕಲ್ಯಾಣ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೭೩


ನನ್ನ ಸಂಕಲ್ಪ. ಚಾಲುಕ್ಯರಾಜ್ಯ ಉಳಿಯಲು ಅದೊಂದೇ ದಾರಿ.”

“ಶರಣರ ಪ್ರತಿನಿಧಿಯಾಗಿ ಚೆನ್ನಬಸವಣ್ಣನವರು ನಿಮ್ಮ ಮಂತ್ರಿಮಂಡಲದಲ್ಲಿದ್ದಾರೆ. ಅವರು ಇದಕ್ಕೆ ಒಪ್ಪುವರೆ?”

“ನನ್ನ ವಿಧ್ವಂಸನ ಕಾರ್ಯಕ್ಕೆ ಮಹಮನೆ ಅನುಭವಮಂಟಪಗಳು ಮೊದಲ ಬಲಿ. ವರ್ಣಧರ್ಮಜಾತಿಪಂಥಗಳನ್ನು ಒಪ್ಪಿಕೊಂಡು ಶರಣಧರ್ಮವನ್ನು ತ್ಯಜಿಸಿದರೆ ಚೆನ್ನಬಸವಣ್ಣನವರು ಉಳಿಯುವರು. ಇಲ್ಲವೆ ಬೇರೆ ಶರಣರಂತೆ ಅವರೂ ನನ್ನ ಭಟರ ಖಡ್ಗಧಾರೆಗೆ ಬಲಿಯಾಗುವರು.”

ಕಾಮೇಶ್ವರಿ ನಡುಗಿದಳು. ಬಿಜ್ಜಳನ ವಂಚನೆ ಕಾಠಿಣ್ಯ ನಿಷ್ಟುರತೆಗಳು ವಿಕೃತ ರೂಪದ ಪಿಶಾಚಿಗಳಂತೆ ಅವಳ ಕಣ್ಣೆದುರಿಗೆ ಸುಳಿದವು. ಚೆನ್ನಬಸವಣ್ಣನವರಂತಹ ಆದರ್ಶವಾದಿ ಸಾತ್ವಿಕ ಶರಣನು ಈ ಧೂರ್ತವಂಚಕ ರಾಜಕಾರಣಿಯಿಂದ ಪರಾಜಿತನಾಗುವುದು ಖಂಡಿತ. ಅವರನ್ನು ಉದ್ಧರಿಸುವ ಮಾರ್ಗವೇನೂ ಇಲ್ಲವೆ?.... ಎಂದು ಕಾಮೇಶ್ವರಿ ಯೋಚಿಸುತ್ತಿದ್ದಂತೆ ಬಿಜ್ಜಳನು ಇಮ್ಮಡಿ ಉತ್ಸಾಹದಿಂದ ಹೇಳಿದನು.

“ದಕ್ಷಿಣಾಪಥದಲ್ಲಿ ಚಾಲುಕ್ಯರಾಜ್ಯ ಅತ್ಯಂತ ವಿಶಾಲವೂ ಸಂಪದ್ಭರಿತವೂ ಆದ ದೇಶವೆಂದು ಹೆಸರಾಗಿದೆ. ಪರರಾಯರ ದಾಳಿ, ಅಂತಃಕಲಹ, ಈ ದ್ವಿಮುಖ ವಿಪತ್ತಿನಿಂದ ಇಷ್ಟೊಂದು ದೊಡ್ಡ ರಾಜ್ಯವನ್ನು ರಕ್ಷಿಸಲು ನಾವು ದೇವತೆಗಳಂತೆ ಬಿಡುಗಣ್ಣರಾಗಬೇಕಾಗುತ್ತದೆ, ರಾಣಿ. ಶರಣರು ತಮ್ಮ ಬಿಡುವಿಲ್ಲದ ಚಳುವಳಿಯಿಂದ ರಾಜ್ಯದ ಪ್ರಜಾ ಸಮುದಾಯವನ್ನು ಪ್ರಭುಮನ್ನೆಯರ ವಿರುದ್ದ ಹುರಿದುಂಬಿಸುತ್ತಿದ್ದಾರೆ. ಅವರು ಪ್ರಚಾರಕ್ಕೆ ತರುತ್ತಿರುವ ಜಾತಿಪಂಥಗಳ ನಿರಾಕರಣೆ, ಸರ್ವಸಮಾನತೆ, ಸ್ತ್ರೀ ಪುರುಷರ ಸಮಾನಾಧಿಕಾರ, ವೇದ ಧರ್ಮಶಾಸ್ತ್ರಗಳ ವಿಡಂಬನೆ, ಈ ಕ್ರಾಂತಿಕಾರಿ ಭಾವನೆಗಳು ನಾಡಿನ ಎಲ್ಲ ಕಡೆ ಸಂಪ್ರದಾಯವಾದಿಗಳನ್ನು ರೊಚ್ಚಿಗೆಬ್ಬಿಸಿದೆ. ಈಗ ನಾವು ವೈದಿಕ ಸಂಪ್ರದಾಯವಾದಿಗಳ ಪಕ್ಷವಹಿಸಿ ಶರಣರ ಉಪಟಳದಿಂದ ಸಮಾಜವನ್ನು ರಕ್ಷಿಸದೆ ಹೋದರೆ ಚಾಲುಕ್ಯರಾಜ್ಯ ಅಳಿಯುವುದು. ಅದರೊಡನೆ ನಾವೂ ಅಳಿಯುವೆವು. ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರಕ್ಕೆ ಏನೂ ಉಳಿಯುವುದಿಲ್ಲ.”

ಕಾಮೇಶ್ವರಿ ಮೌನ. ಉತ್ತರಕ್ಕಾಗಿ ಕೊಂಚಹೊತ್ತು ನಿರೀಕ್ಷಿಸುತ್ತಿದ್ದು ಬಳಿಕ ಬಿಜ್ಜಳನು, “ಏಕೆ ರಾಣಿ ? ಈ ವಿಚಾರದಲ್ಲಿ ನೀನು ಏನೂ ಹೇಳುವುದಿಲ್ಲವೆ ?” ಎಂದನು.

ಕಾಮೇಶ್ವರಿ ನುಡಿದಳು : “ನಿಮ್ಮ ಚಿಕಿತ್ಸೆ ರೋಗದಷ್ಟೇ ಭಯಂಕರವಾಗಿದೆ.