ಪುಟ:ಕ್ರಾಂತಿ ಕಲ್ಯಾಣ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೪

ಕ್ರಾಂತಿ ಕಲ್ಯಾಣ


ಒಂದು ವಿಪತ್ತಿನಿಂದ ಉದ್ಧಾರವಾಗಲು ಅಷ್ಟೇ ಘೋರವಾದ ಇನ್ನೊಂದು ವಿಪತ್ತಿಗೆ ಬಿದ್ದಂತಾಗುವುದು. ಶರಣರ ವಿನಾಶದಿಂದ ಚಾಲುಕ್ಯ ರಾಜ್ಯದ ಪ್ರಜೆಗಳೆಲ್ಲ ನಮಗೆ ವಿರೋಧಿಗಳಾಗುವರು.

“ಮುಂದೆ ಒದಗಬಹುದಾದ ವಿಪತ್ತನ್ನು ತೊಡೆದುಹಾಕಲು ಈಗ ಈ ಚಿಕಿತ್ಸೆ ಅಗತ್ಯ.”
“ಚಿಕಿತ್ಸಾನಂತರ ಮುಂದಿನ ಕಾರ್ಯ?”
“ಪ್ರೇಮಾರ್ಣವನ ಪಟ್ಟಾಭಿಷೇಕ. ಅವನು ಪ್ರಾಪ್ತವಯಸ್ಕನಾಗುವವರೆಗೆ ನಿನ್ನನ್ನು ರಾಜಪ್ರತಿನಿಧಿಯಾಗಿ ನೇಮಿಸುವುದು.”
“ಈ ಯೋಜನೆಯಲ್ಲಿ ಜಗದೇಕಮಲ್ಲರಸರಿಗೆ ಯಾವ ಪಾತ್ರವೂ ಇಲ್ಲವೆ?”

“ಕುಮಾರ ಪ್ರೇಮಾರ್ಣವನನ್ನು ಜಗದೇಕಮಲ್ಲನ ದತ್ತಕನಾಗಿ ಮಾಡಬೇಕೆಂದು ನಾನು ಮೊದಲು ಯೋಚಿಸಿದ್ದೆ, ರಾಣಿ. ಆದರೆ ಈಗ ಅದರ ಅಗತ್ಯವಿರುವುದಿಲ್ಲ. ಕೊನೆಯವರೆಗೆ ಜಗದೇಕಮಲ್ಲನು ಬಂಧನದಲ್ಲಿರಬೇಕಾಗುವುದು.”

ಉಕ್ಕಿಬರುತ್ತಿದ್ದ ಉಪಹಾಸದ ನಗುವನ್ನು ತಡೆಯಲು ಕಾಮೇಶ್ವರಿ ಸಮರ್ಥಳಾಗಲಿಲ್ಲ. "ನಿಮ್ಮ ಈ ಪರಿವರ್ತನೆಗೆ ನಮ್ಮ ಗುಪ್ತಪ್ರಣಯ ಕಾರಣವಲ್ಲವೆ? ನೀವು ಜಗದೇಕಮಲ್ಲರಸರನ್ನು ಬಿಡುಗಡೆಮಾಡಿ ಚಾಲುಕ್ಯ ಸಿಂಹಾಸನದಲ್ಲಿ ಕುಳ್ಳಿರಿಸುವಿರೆಂದು ಎಲ್ಲರೂ ಹೇಳುತ್ತಾರೆ. ನಾನು ಕೂಡಾ ಅದನ್ನು ನಂಬಿದೆ,” ಎಂದಳು ಅವಳು. ಪ್ರಣಯಿಗಳಿಗೆ ಸಹಜವಾದ ಸಲಿಗೆ ಅವಳಿಗೆ ಸಹಾಯಕವಾಯಿತು.

“ನಿನ್ನ ಗರುಡನಾಗುವ ಮೊದಲು ನನಗೆ ಆ ಯೋಚನೆ ಇತ್ತು, ರಾಣಿ. ಈಗ ಅದು ಪರಿವರ್ತನೆ ಆಗಿದೆ. ನಿನ್ನ ಪ್ರೇಮದಲ್ಲಿ ನನಗೆ ಪ್ರತಿಸ್ಪರ್ಧಿಯಾದವರೆಲ್ಲ ನನ್ನ ಕೋಪಕ್ಕೆ ಪಾತ್ರರು. ಅವರಲ್ಲಿ ಒಬ್ಬರನ್ನು ಕೂಡಾ ಉಳಿಸಬಾರದೆಂದು ನನ್ನ ಶಪಥ”. -ನಿರಂಕುಶ ಸರ್ವಾಧಿಕಾರಿಯ ನಿಷ್ಠುರತೆಯಿಂದ ಬಿಜ್ಜಳನು ಹೇಳಿದನು. ಕಲಚೂರ್ಯ ಅರಮನೆಯಲ್ಲಿ ಆ ಅಜ್ಞಾತ ವಾಸಗೃಹದಲ್ಲಿ ಹಠಾತ್ತಾಗಿ ಸಿಡಿಲೆರಗಿ ದಂತಾಯಿತು ಕಾಮೇಶ್ವರಿಗೆ.

ಆ ವಿಚಿತ್ರ ಅನುಭಾವ ಕ್ಷಣಾರ್ಧದಲ್ಲಿ ಬಿಜ್ಜಳನನ್ನೂ ಮುಟ್ಟಿತು. ಅನುತಾಪದ ಜ್ವಾಲೆಯಿಂದ ಅವನು ನಾಲಿಗೆ ಕಚ್ಚಿದನು. ಪ್ರಥಮ ಸಮಾಗಮದಲ್ಲಿಯೇ ತನ್ನ ಹೃದಯಾಂತರಾಳದ ತೀವ್ರಭಾವನೆಗಳನ್ನು ತೋಡಿಕೊಂಡದ್ದು ಅನುಚಿತವೆಂದು ತಿಳಿದನು. ಆಡಿದ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವ ಉಪಾಯವಿದ್ದಿದ್ದರೆ, ಅದರಂತೆ ನಡೆಯಲು ಆಗ ಅವನೆಂದಿಗೂ ಹಿಂಜರಿಯುತ್ತಿರಲಿಲ್ಲ. ತನ್ನ ನುಡಿಗಳ ದಯಾಹೀನ ಕಾಠಿಣ್ಯ ಕಾಮೇಶ್ವರಿಯನ್ನು ನಡುಗಿಸಿದ್ದನ್ನು ಕಂಡು ಅವನು ತಾನೂ