ಪುಟ:ಕ್ರಾಂತಿ ಕಲ್ಯಾಣ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೭೫


ನಡುಗಿದನು. ತುಸುಹೊತ್ತಿನ ಮೇಲೆ ಕಾಮೇಶ್ವರಿ ಚೇತರಿಸಿಕೊಂಡು ಕಿಲಕಿಲ ನಕ್ಕಾಗ ಅವನಿಗೆ ಸಮಾಧಾನವಾಯಿತು.

“ನನ್ನ ಪ್ರಿಯರ ಪಟ್ಟಿಯನ್ನೂ ಮಾಡಿರುವಿರಲ್ಲವೇ ?” -ನಗೆ ದನಿಯಿಂದ ಅವಳು ಪ್ರಶ್ನಿಸಿದಳು.

“ಪಟ್ಟಿ ಮಾಡುವ ಅಗತ್ಯವಿಲ್ಲ, ರಾಣಿ. ನಿನ್ನ ಪ್ರಿಯರೆಲ್ಲರ ಹೆಸರುಗಳು ನನಗೆ ತಿಳಿದಿವೆ.” –ನಗದನಿಯಿಂದಲೇ ಬಿಜ್ಜಳನು ಉತ್ತರಿಸಿದನು.

“ಸರ್ವಾಧಿಕಾರಿ ದಂಡನಾಯಕರಿಗೆ ಕರಣಿಕ ವೃತ್ತಿಯ ಪರಿಚಯವೂ ಇದೆ ಹಾಗಾದರೆ! ನಿಮ್ಮ ಪಟ್ಟಿಯಲ್ಲಿ ಮೊದಲ ಹೆಸರು ಹೇಳಿರಿ, ಕೇಳೋಣ.”-ತುಸು ಗಂಭೀರವಾಗಿ, ಒಡತಿ ಲೆಕ್ಕಿಗರನ್ನು ಪ್ರಶ್ನಿಸುವಂತೆ ನುಡಿದಳು ಕಾಮೇಶ್ವರಿ.

“ಪಟ್ಟಿ ಅಷ್ಟೇನೂ ದೊಡ್ಡದಲ್ಲ. ತೈಲಪನ ಅವಸಾನವಾಗುವವರೆಗೆ ಸತಿಯಾಗಿಯೇ ಇದ್ದೆ ನೀನು. ನಿನ್ನ ಚೆಲ್ಲು ಪ್ರಾರಂಭವಾದದ್ದು ಕೆಲವು ತಿಂಗಳ ಅನಂತರ. ನೀನು ಕಲ್ಯಾಣಕ್ಕೆ ಬಂದು ಚಾಲುಕ್ಯ ಅರಮನೆಯಲ್ಲಿ ಬಿಡಾರ ಮಾಡಿದಾಗ.” -ಬಿಜ್ಜಳನು ಅಷ್ಟೇ ಗಂಭೀರವಾಗಿ ಉತ್ತರ ಕೊಟ್ಟನು. ಈ ನಿರಂಕುಶ ನಿಷ್ಠುರನಿಂದ ದಯೆ ಸಭ್ಯತೆಗಳನ್ನು ನಿರೀಕ್ಷಿಸುವುದು ವ್ಯರ್ಥವೆಂದು ತಿಳಿದು ಕಾಮೇಶ್ವರಿ,

“ನಾನು ಸಧವೆಯಾಗಿದ್ದವರೆಗೆ ಸತಿಯೆಂದು ನೀವು ತಿಳಿದಿರುವುದು ನನ್ನ ಭಾಗ್ಯ. ಈಗಿನ ರಾಜಾಂತಃಪುರಗಳ ವಿವಾಹಿತ ಸ್ತ್ರೀಯರಲ್ಲಿ ಸತೀತ್ವ ಒಂದು ಅಪರೂಪವಸ್ತು!” -ಎಂದು ಕಟಕಿಯಾಡಿದಳು.

“ನಿನ್ನ ವಿಚಾರದಲ್ಲಿಯೂ ಅಂತಹ ಕೆಲವು ಕಥೆಗಳು ಪ್ರಚಾರದಲ್ಲಿದ್ದವು. ಆ ಅಪವಾದಗಳಿಗೆ ಕಿವಿಗೊಟ್ಟು ತೈಲಪನು ಕೀರ್ತಿದೇವನನ್ನು ತನ್ನ ಔರಸನಲ್ಲವೆಂದು ನಿರಾಕರಿಸಿದನು. ಆ ಕಥೆಗಳೆಲ್ಲ ನಿರಾಧಾರವೆಂದು ನನಗೆ ಖಚಿತವಾಗಿದೆ. ನೀನು ಮೊದಲಸಾರಿ ಜಾರಿದ್ದು ಚಾಲುಕ್ಯ ಅರಮನೆಯಲ್ಲಿ, ಕಿಶೋರ ವಯಸ್ಸಿನ ಚಿತ್ರಕಾರನೊಬ್ಬನ ಚೆಲುವನ್ನು ಮೋಹಿಸಿ. ಅವನ ಹೆಸರು ಶೀಲವಂತ ಎಂದು.”

ಕಾಮೇಶ್ವರಿ ಚಕಿತೆಯಾದಳು. ಅಂತರಂಗದ ತಳಮಳವನ್ನು ತಡೆಯಲಾರದೆ ಸಿಡಿದೆದ್ದು,

“ಎಂತಹ ಕಲುಷಿತ ಆಪಾದನೆ ! ಒಬ್ಬ ನಿರುಪದ್ರವಿ ಬಾಲಕನ ಮೇಲೆ,” ಎಂದು ಚಡಪಡಿಸಿದಳು.

“ಶೀಲವಂತ ನಿನ್ನನ್ನು ನಗ್ನೆಯಾಗಿ ಚಿತ್ರಿಸಿದ ವರ್ಣಚಿತ್ರ ನನ್ನಲ್ಲಿದೆ, ರಾಣಿ. ಸತ್ಯವನ್ನು ನಿರಾಕರಿಸಲೇಕೆ ?” -ಎಂದನು ಬಿಜ್ಜಳನು ಅನುನಯದ ದನಿಯಿಂದ.