ಪುಟ:ಕ್ರಾಂತಿ ಕಲ್ಯಾಣ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ಕ್ರಾಂತಿ ಕಲ್ಯಾಣ

"ಆ ಚಿತ್ರ ನಿಮಗೆ ದೊರಕಿದ್ದು ಹೇಗೆ?"

"ಚಾಲುಕ್ಯ ಅರಮನೆಯ ಕೆಲಸಗಾರನೊಬ್ಬನಿಗೆ ನೂರು ವರಹಗಳನ್ನು ಕೊಟ್ಟು ಕೊಂಡುಕೊಂಡೆ."

"ಕಾಮೇಶ್ವರಿ ನಕ್ಕು, ಚಿತ್ರ ಸಾಕ್ಷಿ ನುಡಿಯಲು ಸಮರ್ಥವಾಗಿದ್ದರೆ, ಅದು ಒಂದು ಕಲ್ಪನಾ ಚಿತ್ರವೆಂದೂ, ಶೀಲವಂತ ನನ್ನ ನಗ್ನತೆಯನ್ನು ಕಂಡರಿಯನೆಂದೂ ಸುಲಭವಾಗಿ ತಿಳಿಯುತ್ತಿದ್ದಿರಿ. ಇನ್ನು ನಿಮ್ಮ ಪಟ್ಟಿಯ ಎರಡನೆಯ ಹೆಸರು?" ಎಂದಳು.

"ಜಗದೇಕಮಲ್ಲ. ಬೇಟೆಯ ಅರಣ್ಯ ಶಿಬಿರದಲ್ಲಿ, ಗೋಮಂತಕದ ನರ್ತಕಿಯ ವೇಷದಲ್ಲಿ ನೀನು ಅವನೊಡನೆ ಒಂದು ರಾತ್ರಿಯನ್ನು ಕಳೆದೆ. ಕರ್ಣದೇವ ನಿಮ್ಮ ಮಿಲನಕ್ಕೆ ಸಹಾಯಕನಾದನು."

"ನೀವು ನನ್ನ ಸಲಹೆಯನ್ನು ನಿರಾಕರಿಸಿದಿರಿ. ಬೇರೆ ಮಾರ್ಗ ಹಿಡಿಯಬೇಕಾಯಿತು. ಚಾಲುಕ್ಯ ವಂಶೋದ್ಧಾರಕನನ್ನು ಪಡೆಯುವ ಒಂದೇ ಉದ್ದೇಶದಿಂದ ನಾನು ಆ ಕಾರ್ಯ ಮಾಡಿದೆ."

"ನಿನ್ನ ಉದ್ದೇಶ ಸಫಲವಾಗಲಿಲ್ಲ, ರಾಣಿ. ಮರುದಿನ ನೀನು ಶೀಲವಂತನ ಪ್ರಾಣ ಪಣವಾಗಿ ಕರ್ಣದೇವನಿಗೆ ಒತ್ತೆಯಾದೆ. ಪ್ರೇಮಾರ್ಣವನು ಕರ್ಣದೇವನ ಔರಸ, ಚಾಲುಕ್ಯ ಕುಡಿಯಲ್ಲ."

"ನೀವು ಆ ಕಥೆಯನ್ನು ನಂಬಿದಿರಾ?

"ನಂಬದಿರಲು ಕಾರಣವೇನಿದೆ? ನನ್ನ ಗೂಢಚಾರರು ಆ ಘಟನೆಗಳ ಬಗೆಗೆ ಕುಲಂಕಷವಾದ ಸಂಶೋಧನೆ ನಡೆಸಿ ವರದಿ ಮಾಡಿದ್ದಾರೆ."

"ಚಾಲುಕ್ಯ ರಾಣಿಯ ಮೇಲೆ ನಡೆದ ಈ ಅತ್ಯಾಚಾರಕ್ಕೆ ನೀವು ಕರ್ಣದೇವನಿಗೆ ವಿಧಿಸಿದ ಶಿಕ್ಷೆಯೇನು? ಸಹೋದರನೆಂದು ಕ್ಷಮಿಸಿದಿರಾ?"

"ಸಹೋದರನೆಂಬ ಅಭಿಮಾನ ನನಗಿಲ್ಲ. ಮುಂದೊಂದು ದಿನ ಕರ್ಣದೇವ ತನ್ನ ಅಪರಾಧಕ್ಕೆ ತಕ್ಕ ಶಿಕ್ಷೆ ಪಡೆದೇ ಪಡೆಯುವನು."

"ಶಿಕ್ಷಿಸುವುದು ಬಿಡುವುದು ನಿಮ್ಮ ಕಾರ್ಯ. ಮುಗಿಯಿತೇ ನಿಮ್ಮ ಪಟ್ಟಿ?":"ಇನ್ನೊಂದು ಹೆಸರು ಉಳಿದಿದೆ. ನಿಮ್ಮ ಮನೆಹೆಗ್ಗಡೆ ಅಗ್ಗಳ."

"ಅಗ್ಗಳನು ನನ್ನ ಸ್ವಾಮಿನಿಷ್ಠ ಹೆಗ್ಗಡೆ, ಪ್ರಿಯನಲ್ಲ. ಬ್ರಹ್ಮದೇವ ಪುರುಷರನ್ನು ಸೃಷ್ಟಿಸಿದಾಗ ಬುದ್ಧಿ ವಿವೇಕಗಳನ್ನು ತಲೆಯಲ್ಲಿಡದೆ ಮತ್ತಾವುದೋ ಅವಾಚ್ಯ ಅಶ್ಲೀಲಸ್ಥಾನದಲ್ಲಿ ಇಟ್ಟನೆಂದು ಕಾಣುತ್ತದೆ. ಮಿಥ್ಯೆಯನ್ನು ಸತ್ಯವೆಂದು ತಿಳಿಯುವ ನಿಮ್ಮಂತಹ ಅಂಧ ಅವಿಶ್ವಾಸಿಗಳೊಡನೆ ವಾದಿಸುವುದು ವ್ಯರ್ಥ," -ಎಂದು ಹೇಳಿ