ಪುಟ:ಕ್ರಾಂತಿ ಕಲ್ಯಾಣ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೮

ಕ್ರಾಂತಿ ಕಲ್ಯಾಣ

ಗಣಿಕೆಯಾಗಿದ್ದಳು. ಮಕ್ಕಳಿಲ್ಲದ ವಿಧವೆಯಾದವಳು ನನ್ನನ್ನು ಆದರ ಮಮತೆಗಳಿಂದ ಸಾಕಿದರೂ ರಾಜಾಂತಃಪುರಗಳಿಗೆ ಸಹಜವಾದ ದುಷ್ಟ ಪ್ರಭಾವಗಳಿಂದ ರಕ್ಷಿಸಲು ಸಮರ್ಥಳಾಗಲಿಲ್ಲ. ನನ್ನ ತಂದೆಗೆ ಇಬ್ಬರು ಪಟ್ಟಮಹಿಷಿಯರೂ, ಹಲವು ಮಂದಿ ಗಣಿಕಾಪತ್ನಿಯರು ಇದ್ದರಾದರೂ ನನ್ನನ್ನು ಸಾಕುತ್ತಿದ್ದ ದಾದಿಯ ಮೇಲೆ ಹೆಚ್ಚು ಪ್ರೇಮ. ನನ್ನನ್ನು ನೋಡಲು ಬಂದಾಗಲೆಲ್ಲಾ ದಾದಿಯೊಡನೆ ಚಕ್ಕಂದವಾಡದೆ ಹೋಗುತ್ತಿರಲಿಲ್ಲ ಅವರು. ಕೊನೆಕೊನೆಗೆ ತಂದೆ ಬರುವುದು ನನ್ನನ್ನು ನೋಡುವುದಕ್ಕಲ್ಲ, ದಾದಿಯೊಡನೆ ಚಕ್ಕಂದಕ್ಕಾಗಿ ಎನ್ನುವಷ್ಟು ದೂರಹೋಯಿತು ಆ ವಿಚಾರ. ಒಂದೊಂದು ದಿನ ರಾತ್ರಿ ಅರಮನೆಯಲ್ಲಿ ಎಲ್ಲರೂ ಮಲಗಿ ನಿದ್ದೆ ಹೋದಮೇಲೆ ತಂದೆ ನಾವಿದ್ದ ವಾಸಗೃಹಕ್ಕೆ ರಹಸ್ಯವಾಗಿ ಬರುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ದಾದಿ, ಪಾರ್ಶ್ವದಲ್ಲಿ ಮಲಗಿದ್ದ ನನ್ನನ್ನು ನಿದ್ರೆಮಾಡಿಸಿ ತಂದೆಯ ಆತುರಕ್ಕೆ ಮೈಯೊಡ್ಡ ಬೇಕಾಗುತ್ತಿತ್ತು. ಹೀಗೆ ಏಳೆಂಟು ವರ್ಷಗಳಾಗುವ ಮೊದಲೆ ನಾನು ಸ್ತ್ರೀ ಪುರುಷ ಸಂಬಂಧವನ್ನು ಕುರಿತ ಎಲ್ಲ ರಹಸ್ಯಗಳನ್ನೂ ತಿಳಿದೆ. ಅರಮನೆಯ ಬೇರೆ ವಾಸಗೃಹಗಳಲ್ಲಿ, ಮೊಗಶಾಲೆ ವಾತಾಯನಗಳ ಕತ್ತಲು ತುಂಬಿದ ಮೂಲೆಗಳಲ್ಲಿ, ಅರಮನೆಯ ರಾಜಮಹಿಳೆಯರು, ಗಣಿಕೆಯರು, ದಾಸದಾಸಿಯರು, ಪರಿವಾರದ ನಟ ನರ್ತಕ ಪಂಡಿತ ಗಾಯಕರು, ಇವರ ನಡುವೆ ನಡೆಯುತ್ತಿದ್ದ ಸರಸಸಲ್ಲಾಪ ಸಂಕೇತಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನನಗೆ ಈ ಅನುಭವ ಸಹಾಯಕವಾಯಿತು.

"ಈ ರೀತಿ ನನ್ನ ಬುದ್ಧಿಚತುರತೆ ಅಶ್ಲೀಲದ ಕಡೆಗೆ ತಿರುಗುತ್ತಿದ್ದುದನ್ನು ಗಮನಿಸಿದ ದಾದಿ ನನ್ನನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ಮೊದಲುಮಾಡಿದಳು. ಸಮವಯಸ್ಕರಾದ ಬಾಲಕರೊಡನೆ ಆಡಲು ಬಿಡತ್ತಿರಲಿಲ್ಲ. ಅಣ್ಣ ವಿಜಯಾರ್ಕನು ಕೂಡಾ ದಾದಿ ಎದುರಿಗಿದ್ದಾಗಲೇ ನನ್ನನ್ನು ನೋಡಬೇಕಾಗುತ್ತಿತ್ತು. ನನ್ನ ವಯಸ್ಸು ಹೆಚ್ಚಿದಂತೆ ದಾದಿಯ ಸರ್ಪಕಾವಲು ಬಲವಾಯಿತು. ಅದರ ಫಲವಾಗಿ ನಾನು ಕೈಶೋರವನ್ನು ಕಳೆದು ತರುಣಿಯಾದರೂ ಪುರುಷ ಸಂಬಂಧವಿಲ್ಲದ ಕನ್ಯೆಯಾಗಿಯೇ ಉಳಿದಿದ್ದೆ.

"ನಮ್ಮ ರಾಜಾಂತಃಪುರಗಳಲ್ಲಿ ಇದೊಂದು ಅಪೂರ್ವ ಅದ್ಭುತ ಘಟನೆ ಎಂಬುದನ್ನು ನೀವು ಅನುಭವದಿಂದ ತಿಳಿದಿರಬಹುದು. ಅಲ್ಲಿ ಎಲ್ಲ ಕಡೆ ಹರಡಿರುವ ಕಾಮೋತ್ತೇಜಕವಾದ ಕಲುಷಿತ ವಾತಾವರಣ, ಪರಿವಾರದ ದಾಸದಾಸಿಯರ ಅಸಂಯತ ಅನೀತಿ ವರ್ತನೆ, ರಾಜಮಹಿಳೆಯರ ಮತ್ತು ರಾಜನ ಗಣಿಕಾಪರಿವಾರದ ಅಕ್ರಮ ಅಗಮ್ಯ ಸಂಬಂಧಗಳು,-ಈ ದುಷ್ಟಶಕ್ತಿಗಳ ನಡುವೆ ಅವುಗಳ