ಪುಟ:ಕ್ರಾಂತಿ ಕಲ್ಯಾಣ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೭೯

ಪ್ರಭಾವಕ್ಕೊಳಗಾಗಿ ಬೆಳೆಯುವ ರಾಜಕನ್ಯೆ ಎಂಟು ಹತ್ತು ವರ್ಷಗಳು ತುಂಬುವ ಮೊದಲೆ ಪರಿವಾರದ ಯಾವನಾದರೊಬ್ಬ ಸಾಹಸಿ ತರುಣನ ಪ್ರೇಯಸಿ ಆಗುತ್ತಾಳೆ. ಮದುವೆಯಾಗಿ ಗಂಡನ ಮನೆಗೆ ಹೋಗುವ ಮೊದಲೇ ಗರ್ಭವತಿಯಾಗಿ ಮಗುವನ್ನು ಹೆತ್ತ ಪ್ರಸಂಗಗಳು ನಮ್ಮ ರಾಜಾಂತಃಪುರಗಳು ವರ್ಣಿಸಲ್ಪಟ್ಟಿವೆ.

"ಈ ಪರಿಸ್ಥಿತಿಯ ಫಲವಾಗಿ ಎಷ್ಟೇ ಉದ್ರೇಕಕ್ಕೆ ಒಳಗಾಗಲಿ ಮನಶ್ಯಕ್ತಿ ಸಂಕಲ್ಪಗಳಿಂದ ಅದನ್ನು ತಡೆದಿಡುವ ಸಂಯಮ ನನಗೆ ಅಭ್ಯಾಸವಾಯಿತು. ಹೆಣ್ಣಿಗೆ ಸಹಜವಾದ ವಿಭ್ರಮವಿಲಾಸ, ಆಕರ್ಷಣೆಗಳನ್ನು ನನ್ನ ಇಚ್ಛೆ ಅನುಕೂಲಗಳ ಸಾಧನಗಳನ್ನಾಗಿ ಉಪಯೋಗಿಸಿಕೊಳ್ಳುವ ಕೌಶಲ ಮೂಡಿತು. ಒಂದು ದೃಷ್ಟಿಯಿಂದ ಅವುಗಳಲ್ಲಿ ಸಿದ್ಧಿ ಪಡೆದೆನೆಂದೂ ಹೇಳಬಲ್ಲೆ.

"ತೈಲಪ ದೇವನೊಡನೆ ಮದುವೆಯಾದಾಗ ನನಗೆ ೧೮ ವರ್ಷ ವಯಸ್ಸು. ಕಲ್ಯಾಣದ ಚಾಲುಕ್ಯ ಅರಮನೆಗೆ ಬಂದು ಆಗತಾನೆ ಬೆಳೆಯುತ್ತಿದ್ದ ಗಣಿಕಾಪರಿವಾರವನ್ನು ಕಂಡಾಗ ನನಗೆ ಆಶ್ಚರ್ಯವಾಗಲಿಲ್ಲ. ರಾಜಾಂತಃಪುರಗಳ ಕಾಮೋತ್ತೇಜಕ ಅನೀತಿಮಯ ಅಶ್ಲೀಲ ಪರಿಸ್ಥಿತಿ ಆಗಲೆ ನನಗೆ ಪರಿಚಯವಾಗಿತ್ತು. ನನಗೆ ಇಚ್ಛೆ ಇರಲಿ, ಇಲ್ಲದಿರಲಿ, ಮೊದಲ ಕೆಲವು ವಾರಗಳು ಪತಿಯ ಆತುರ ಆವೇಗಗಳಿಗೆ ದೇಹವನ್ನು ಬಲಿಕೊಡುವುದು ನನಗೆ ಅನಿವಾರ್ಯವಾಯಿತು. ನನ್ನ ಹೊಸತನ ಕಳೆದು ಪತಿಯ ದೃಷ್ಟಿ ಪುನಃ ಗಣಿಕಾವಾಸದ ಕಡೆ ತಿರುಗುವಷ್ಟರಲ್ಲಿ ನಾನು ಗರ್ಭಿಣಿಯಾಗಿದ್ದೆ. ಆಮೇಲಿನ ಹತ್ತು ಹನ್ನೊಂದು ವರ್ಷಗಳಲ್ಲಿ ನಾನು ಹತ್ತು ರಾತ್ರಿಗಳನ್ನು ಪತಿಯೊಡನೆ ಕಳೆದಿದ್ದರೆ ಹೆಚ್ಚೆಂದು ಕಾಣುತ್ತದೆ. ಪತಿ ಗಣಿಕಾವಾಸದಲ್ಲಿ, ನಾನು ಅರಮನೆಯ ಏಕಾಂತದಲ್ಲಿ. ಪ್ರಿಯರನ್ನು ಹುಡುಕಲು ಸಾಕಾದಷ್ಟು ಅನುಕೂಲ ಅವಕಾಶಗಳು ನನಗಿದ್ದವು. ಅಭ್ಯರ್ಥಿಗಳ ಅಭಾವವಿರಲಿಲ್ಲ. ಆದರೆ ಚಿಕ್ಕಂದಿನಿಂದ ಅಭ್ಯಾಸವಾಗಿದ್ದ ಸಂಯಮ ನನ್ನನ್ನು ರಕ್ಷಿಸಿತು.

"ಮದುವೆಯಾದ ಹನ್ನೆರಡನೆಯ ವರ್ಷ ನನಗೆ ಪತಿವಿಯೋಗವಾದದ್ದು. ಕೆಲವೇ ವಾರಗಳ ಅಂತರದಲ್ಲಿ ಕುಮಾರ ಕೀರ್ತಿವರ್ಮನೂ ಮೃತನಾದನು. ಆಮೇಲೆ ಚಾಲುಕ್ಯ ವಂಶದ ಉದ್ದಾರಕ್ಕಾಗಿ ಜಗದೇಕಮಲ್ಲರಸರ ಸಂಬಂಧ ಬೆಳೆಸುವ ಉದ್ದೇಶದಿಂದ ನಾನು ಕಲ್ಯಾಣಕ್ಕೆ ಬಂದೆ. ನನಗೆ ಶೀಲವಂತನ ಪರಿಚಯವಾದದ್ದು ಆ ಸಂದರ್ಭದಲ್ಲಿ. ಅವನು ವಯಸ್ಸಿನಲ್ಲಿ ಚಿಕ್ಕವನಾದರೂ ಕಲಾಜಾಗ್ರತಿ ಸೌಂದರ್ಯ ಪ್ರಜ್ಞೆಗಳು ಚೆನ್ನಾಗಿ ಬೆಳೆದಿದ್ದವು. ನಾನು ಅಸಾಮಾನ್ಯ ರೂಪವತಿ ಎಂಬುದನ್ನು ಮೊದಲು ಗುರುತಿಸಿದವನು ಆ ಕಿಶೋರ ವಯಸ್ಸಿನ ಕಲಾವಿದ. ಅವನ ಮೆಚ್ಚುಗೆ ನನ್ನನ್ನು ಆಕರ್ಷಿಸಿದ್ದು ನಿಜ. ಆದರೆ ಅದರಲ್ಲಿ ಪ್ರೇಮದ ಪಾತ್ರವೇನೂ ಇರಲಿಲ್ಲ."