ಪುಟ:ಕ್ರಾಂತಿ ಕಲ್ಯಾಣ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೦

ಕ್ರಾಂತಿ ಕಲ್ಯಾಣ


ಇಷ್ಟು ಹೇಳಿ ಕಾಮೇಶ್ವರಿ ನಿಲ್ಲಿಸಿದಳು. ಆಗ ಬಿಜ್ಜಳನು, “ಹಾಗಾದರೆ ಅವನು ನಿನ್ನ ನಗ್ನ ಚಿತ್ರ ಬರೆದದ್ದು ಹೇಗೆ?” ಎಂದು ಪ್ರಶ್ನಿಸಿದನು.

ಕಾಮೇಶ್ವರಿ ಹೇಳಿದಳು : “ಅದೊಂದು ಕಲ್ಪನಾಚಿತ್ರ. ವಸ್ತ್ರ ಸಹಿತವಾದ ನನ್ನ ಬೆನ್ನ ಕಡೆಯ ನಿಲುವನ್ನು ತೋರಿಸುವ ಒಂದು ಚಿತ್ರವನ್ನು ಆಧರಿಸಿ ಶೀಲವಂತ ಆ ಚಿತ್ರವನ್ನು ಬರೆದನು. ಚಿಕ್ಕ ವಯಸ್ಸಿನಲ್ಲಿಯೇ ಅವನ ಕಲಾದೃಷ್ಟಿ ಪಾರದರ್ಶಕವಾಗಿತ್ತೆಂಬುದನ್ನು ಇದರಿಂದ ತಿಳಿಯಬಹುದು. ನಾನು ಅಪೇಕ್ಷಿಸಿದ್ದರೆ ಅವನನ್ನು ಸುಲಭವಾಗಿ ಒಲಿಸಿಕೊಳ್ಳುತ್ತಿದ್ದೆ. ಅಂತಃಪುರವಾಸಿನಿಯರ ಸಂಪ್ರದಾಯದಂತೆ ನನಗಿಂತ ಹತ್ತಾರು ವರ್ಷ ಚಿಕ್ಕವನಾಗಿದ್ದ ಶೀಲವಂತನಿಗೆ ನಾನು ಪ್ರೇಮಶಿಕ್ಷಕಿ ಆಗಬಹುದಾಗಿತ್ತು. ಆದರೆ ಪ್ರಯತ್ನ ಪರಿಶ್ರಮಗಳಿಲ್ಲದೆ ದೊರಕಬಹುದಾಗಿದ್ದ ಆ ಅಲ್ಪ ವಿಜಯಕ್ಕೆ ನಾನು ಹಾರೈಸಲಿಲ್ಲ. ಆಮೇಲೆ ನಾನು ಬೇಟೆಯ ಅರಣ್ಯ ಶಿಬಿರದಲ್ಲಿ ಜಗದೇಕಮಲ್ಲರಸರನ್ನು ಕಂಡದ್ದು. ಅದರ ವಿವರಗಳನ್ನು ನೀವು ತಿಳಿದಿದ್ದೀರಿ. ವಂಶವೃದ್ಧಿಗಾಗಿ ನಡೆದ ಆ ಸಂಬಂಧದಿಂದ ನನ್ನ ಸತೀತ್ವ ಭಂಗವಾಗಲಿಲ್ಲ."

-ಎಂದು ಕಾಮೇಶ್ವರಿ ಪುನಃ ನಿಲ್ಲಿಸಿದಳು. ಈ ಮಾತುಗಳು ನಡೆಯುತ್ತಿದ್ದಂತೆ ಬಿಜ್ಜಳನು ಅವಳ ಅಸಾಮಾನ್ಯ ಅಂಗಸೌಷ್ಟವ ಲಾವಣ್ಯಗಳನ್ನು ಬೆಬ್ಬೆರಗಾಗಿ ಎವೆಯಿಕ್ಕದೆ ನೋಡುತ್ತಿದ್ದನು. ಪ್ರವಾಸ ವಿಜಯ ಯಾತ್ರೆಗಳಲ್ಲಿ ಅವನು ಬಹು ಮಂದಿ ಚೆಲುವೆಯರನ್ನು ಕಂಡಿದ್ದನು. ವಿಭ್ರಮ ವಿಲಾಸಗಳಿಗೆ ಹೆಸರಾದ ತ್ರಿಪುರಿಯ ಕ್ಷತ್ರಿಯ ಕನ್ಯೆಯರು, ಕೋನಾರ್ಕದ ಶೃಂಗಾರಪ್ರಿಯ ನರ್ತಕಿಯರು, ಚೋಳ ಪಾಂಡ್ಯ ದೇಶಗಳ ಲಾವಣ್ಯವತಿಯರಾದ ಶ್ರೀಮಂತ ಪುತ್ರಿಯರು, ಕ್ರೀಡಾನಿಪುಣರಾದ ಗೋಮಂತಕದ ಗಣಿಕೆಯರು, ಗುಜರಾತಿನ ನಗೆಗಣ್ಣು ತುಂಬೆದೆಯ ವಣಿಕ್ ಪುತ್ರಿಯರು, ಸಪ್ತ ಕೊಂಕಣಗಳ ವಿಲಾಸವತಿ ಗ್ರಾಮೀಣ ಯುವತಿಯರು, ಅವನಿಗೆ ಪರಿಚಿತರಾಗಿದ್ದರು. ಆದರೆ ಕಾಮೇಶ್ವರಿಯಂತಹ ಅಸಾಮಾನ್ಯ ರೂಪವತಿಯನ್ನು ಅವನು ಯಾವಾಗಲೂ ಎಲ್ಲಿಯೂ ನೋಡಿರಲಿಲಲ. ಸೌಂದರ್ಯದ ನೆಲೆವೀಡೆಂದು ಕರೆಯಲ್ಪಡುತ್ತಿದ್ದ ಕುಂತಳದಲ್ಲಿಯೂ ಅಂತಹ ರೂಪವತಿಯರು ತಲೆಮಾರಿಗೆ ಒಬ್ಬರೋ ಇಬ್ಬರೋ ಜನ್ಮತಳೆಯುವರೆಂದು ಅವನು ತಿಳಿದಿದ್ದನು.

ಕಾಮೇಶ್ವರಿ ಸೀರೆಯುಟ್ಟು ಸೆರಗು ಮುಡಿಗಳನ್ನು ಸರಿಪಡಿಸಿಕೊಳ್ಳುತ್ತಿದ್ದಂತೆ ಅವನು, “ನಿನ್ನನ್ನು ನೋಡಿ ನನಗೊಂದು ಪದ್ಯ ನೆನಪಾಗುತ್ತಿದೆ ರಾಣಿ” ಎಂದನು.

“ರಾಜಕಾರಣಗಳ ನಡುವೆ ಕವಿತೆಗಳನ್ನು ಓದುವ ಹವ್ಯಾಸವೂ ಇದೆ ನಿಮಗೆ ! ಯಾವುದಾ ಪದ್ಯ?” ಎಂದು ಕಾಮೇಶ್ವರಿ ಹುಡುಗಾಟಿಕೆಯಿಂದ ಕೇಳಿದಳು.