ಪುಟ:ಕ್ರಾಂತಿ ಕಲ್ಯಾಣ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೮೧


“ರಾಜಕಾರ್ಯಗಳ ನಡುವೆ ನನಗೆ ಕೊಂಚ ಶಾಂತಿಯನ್ನು ಕೊಟ್ಟಿದ್ದರೆ ಅದು ಈ ಪದ್ಯ,” ಎಂದು ಬಿಜ್ಜಳನು ಪಠಿಸಿದನು -

“ಮಾತಿನಲಿ ವಕ್ರತೆಯು, ಕಣ್ಣುಗಳ ಚಾಂಚಲ್ಯ,
ಹುಬ್ಬುಗಳ ಕುಟಿಲತೆ ವಿಲಾಸವಿಭ್ರಮವು
ಕುಚಯುಗದ ಕಠಿಣತೆ, ನಿತಂಬಗಳ ವಿಸ್ತಾರ,
ಶಾಂತಲೆ, ಇವೆಲ್ಲ ದೋಷಗಳು ನಿನ್ನ
ಅಂಗಗಳನಾಶ್ರಯಿಸಿ ಗುಣದಂತೆ ಮರೆಯುವವು.
ಸೋಜಿಗವು ನಿನ್ನ ಸೌಭಾಗ್ಯ ಲೀಲೆ !
ಇದನ್ನೆಲ್ಲ ಬಣ್ಣಿಸುವ ನಿಶಿತಮತಿ ಕವಿವರನು
ಹುಟ್ಟುವನೊ ಹುಟ್ಟನೋ ಅವನಿಯಲ್ಲಿ ?”*

“ಹೊಯ್ಸಳ ರಾಣಿ ಶಾಂತಲಾದೇವಿಯನ್ನು ಕುರಿತು ಉನ್ಮತ್ತ ಕವಿಯೊಬ್ಬನು ಹೇಳಿದ ಈ ಪದ್ಯವನ್ನು ನೀವು ನನಗೇಕೆ ಅನ್ವಯಿಸುವಿರಿ?”

“ಕವಿ ಉನ್ಮತ್ತನಾದರೂ ಅವನು ಬರೆದ ಪದ್ಯ ಶಾಸನಸ್ಥವಾಯಿತು, ರಾಣಿ. ದೋರಸಮುದ್ರದಲ್ಲಿರುವ ನಮ್ಮ ಪತ್ರಲೇಖಕನು, ವಿಷ್ಣುವರ್ಧನನ ಶಾಸನದಿಂದ ಈ ಪದ್ಯವನ್ನು ಉದ್ಧರಿಸಿ ಕಳುಹಿಸಿದನು. ಓದಿದಾಗ ಚಿತ್ರದ ನೆನಪಾಗಿ ಈ ಪದ್ಯವನ್ನು ಅದರೊಡನೆ ಕೂಡಿಸಿಟ್ಟೆ” -ಬಿಜ್ಜಳನು ಉತ್ತರ ಕೊಟ್ಟನು.

“ಕೂಡಿಸಿಟ್ಟ ಕಾರಣ?”

“ಐವತ್ತು ವರ್ಷಗಳ ಹಿಂದೆ ಹೊಯ್ಸಳ ಆಸ್ಥಾನದ ಕವಿಯೊಬ್ಬನು ಶಾಂತಲೆಯನ್ನು ವರ್ಣಿಸಿ ಬರೆದ ಆ ಪದ್ಯ ಶೀಲವಂತ ರಚಿಸಿದ ನಿನ್ನ ಚಿತ್ರಕ್ಕೆ ಹೊಂದಿಕೆಯಾಗುವುದೆಂದು. ಇಂದು ನಿನ್ನನ್ನು ನೋಡಿದಾಗ ನನಗೆ ಸತ್ಯ ದರ್ಶನವಾಯಿತು. ಶಾಂತಲೆಯ ಸೌಂದರ್ಯವನ್ನು ವರ್ಣಿಸಲು ಶಕ್ತನಾದ ಕವಿ ಹುಟ್ಟದಿರಬಹುದು. ಆದರೆ ಸಮಕಾಲೀನ ಶಿಲ್ಪಿಯೊಬ್ಬನು ಆ ಚೆಲುವನ್ನು ಶಿಲೆಯಲ್ಲಿ

____________

  • ಈ ಪದ್ಯದ ಮೂಲ “ ಎಪಿಗ್ರಾಪಿಕಾ ಕರ್ನಾಟಕ"ದ ಶಿವಮೊಗ್ಗ ಸಂಪುಟದ ಸೊರಬ ೧೩೧ನೆಯ ಶಾಸನದಲ್ಲಿ ಈ ರೀತಿ ಇದೆ :
ಉಕ್ತೌ ವಕ್ರಗುಣಂ, ದೃಶೋಸ್ತರಳತಾ , ಸದ್ವಿಭ್ರಮಂ ಭ್ರೂಯುಗೇ,
ಕಾಠಿಣ್ಯ ಕುಚಯೋ, ನಿತಂಬ ಫಲಕೇ ಧತ್ಸೇತಿಮಾತ್ರಕ್ರಮಂ
ದೋಷಾನೇವ ಗುಣೀಕರೋಷಿ ಸುಭಗೇ ಸೌಭಾಗ್ಯ ಭಾಗ್ಯಂ ತವ :ವ್ಯಕ್ತಃಶಾಂತಲದೇವಿ ವಕ್ತುಮವನೌ ಶಕ್ನೋತಿ ಕೋವಾ ಕವಿಃ ||