ಪುಟ:ಕ್ರಾಂತಿ ಕಲ್ಯಾಣ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ಕ್ರಾಂತಿ ಕಲ್ಯಾಣ

ಎರಳೆ ಕಂಗಳ ಚಲುವೆ ಇವಳ ಸೃಷ್ಟಿಕ್ರಮದೆ
ನಾಭಿಯಿಂ ಮೇಲಿನಂಗಗಳನೆಲ್ಲ
ಮೊದಲಿನಮಿತೋತ್ಸಾಹದಿಂದ ಚಲುವಿಕೆಯ ನೆಲೆ
ಎಂಬಂತೆ ವಿರಚಿಸಿದ ವಿಧಿಯು ಬಳಿಕ ;
ದುಡಿದುಡಿದು ದಣಿದು ಬೇಸರಗೊಂಡ ಕೈಗಳಿಂ
ಮುಂದೆ ಜಘನ ಸ್ಥಳದ ಹರವನಿಂತು
ಪೃಥುಲ ಪೃಥುಲ ಸ್ಥೂಲ ಸ್ಥೂಲವಾಗಿ
ನಿರ್ಮಿಸಿದನೋ ಕಾಣೆ, ಜಡತೆ ಮಸಗಿ !
*

ಕಾಮೇಶ್ವರಿ ಬಿಜ್ಜಳನ ಕಡೆ ತಿರುಗಿ, “ಈ ಎರಡು ಪದ್ಯಗಳನ್ನು ನೀವು ಒಂದೇ ಕಡೆ ಬರೆದಿಟ್ಟ ಉದ್ದೇಶವೇನು?” ಎಂದು ಕೇಳಿದಳು.

ಒಂದಕ್ಕೊಂದು ಪೂರಕವೆಂದು ಶಾಂತಲೆಯನ್ನು ಕುರಿತ ಪದ್ಯದಲ್ಲಿ ನಿನ್ನ ಬೆನ್ನ ಕಡೆಯ ನಿಲುವಿನ ಸುಂದರ ವರ್ಣನೆಯಿದೆ. ಅದನ್ನು ಬರೆದ ಕವಿ ಅಷ್ಟಕ್ಕೆ ತೃಪ್ತನಾಗಬೇಕಾಯಿತೋ ಏನೋ ಅಗ್ಗಳನ ಪದ್ಯ ನಿನ್ನ ಮುಂಗಡೆಯ ನಿಲುವನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟಿದಂತೆ ವರ್ಣಿಸುತ್ತದೆ.” –ಬಿಜ್ಜಳನು ನಸನಕ್ಕು ಉತ್ತರ ಕೊಟ್ಟನು.

ಕಾಮೇಶ್ವರಿ ಕೆಲವು ಕ್ಷಣಗಳು ವಿಚಾರಮಗ್ನೆಯಾಗಿ ನಿಂತು ಬಳಿಕ,

“ಎಂತಹ ಅರಸಿಕರು ನೀವು ! ಅಗ್ಗಳನ ಪದ್ಯ ವರ್ಣಿಸುವುದು ನನ್ನನ್ನೇ ಹೋಲುವ ಆ ದಾಸಿಯ ಮುನ್ನಿಲವನ್ನು, ಆ ಪದ್ಯದಲ್ಲಿ ಹೇಳುವಂತೆ ನನ್ನ ಸೃಷ್ಟಿಕ್ರಮದಲ್ಲಿ ಬ್ರಹ್ಮದೇವನು ಬೇಸರಗೊಳ್ಳಲಿಲ್ಲ. ನನ್ನ ರಚನಾವಿಧಾನ ಪೃಥುಲ ಪೃಥುಲವೂ ಅಲ್ಲ, ಸ್ಥೂಲ ಸ್ಥೂಲವೂ ಅಲ್ಲ. ನಾಭಿಯ ಮೇಲೇ ಏಕೆ? ಸರ್ವಾಂಗದಲ್ಲಿಯೂ ನಾನು ಅನುಪಮ ಸುಂದರಿ !” -ಎಂದು ಬಿನ್ನಾಣದಿಂದ ಹೇಳಿದಳು.

ಬಿಜ್ಜಳನಿಗೆ ತನ್ನ ತಪ್ಪಿನ ಅರಿವಾಯಿತು. ನೋಡಿ, ಮುಟ್ಟಿ ಅನುಭವದಿಂದ


* ವಲ್ಲಭದೇವನ “ಸುಭಾಷಿತಾವಳಿ”ಯಲ್ಲಿ ೧೫೬೩ನೆಯದಾಗಿ ಆರ್ಗಟ ಅರ್ಥಾತ್ ಅಗ್ಗಳನ ಹೆಸರಲ್ಲಿ ಉದೃತವಾಗಿರುವ ಮೂಲ ಪದ್ಯ ಹೀಗಿದೆ :

ವಪುರನುಪಮಂ ನಾಭೇರೂರ್ಧ್ವಂ ನಿಧಾಯ ಮೃಗೀದೃಶೋ
ಲಲಿತಲಲಿತೈರಂಗನ್ಯಾಸೈಃ ಪುರಾ ರಭಸಾದಿವ
ತದನು ಸಹಸಾ ಖೆನ್ನೇನೇವ ಪ್ರಜಾಪತಿನಾ ಭ್ರಶಂ
ಪೃಥುಲ ಪೃಥುಲಾ ಸ್ಥೂಲ ಸ್ಥೂಲಾ ಕೃತಾ ಜಘನಸ್ಥಳೀ ||