ಪುಟ:ಕ್ರಾಂತಿ ಕಲ್ಯಾಣ.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೮೫


ತಿಳಿದ ವಿಚಾರದಲ್ಲಿ ನಾನು ತಪ್ಪು ಮಾಡಿದ್ದು ಹೇಗೆ ? ಎಂದು ಅವನು ಚಿಂತಿಸುತ್ತಿದ್ದಂತೆ ಕಾಮೇಶ್ವರಿ, “ಈ ಅಸತ್ಯ ಅಶ್ಲೀಲ ವಸ್ತುಗಳು ಉಳಿದಿರುವುದು ಸಲ್ಲ!” ಎಂದು ಹೇಳಿ ಚಿತ್ರವನ್ನೂ ಪದ್ಯಗಳು ಬರೆದಿದ್ದ ಕರಡು ಹಾಳೆಯನ್ನೂ ಎರಡಾಗಿ ಹರಿದು ದೀಪದ ಉರಿಗೆ ಹಿಡಿದಳು.

ಬಿಜ್ಜಳನು ಹಾರಿಬಂದು ತಡೆಯಲು ಪ್ರಯತ್ನಿಸಿದಾಗ ಅವಳು ಉನ್ಮತ್ತಳಂತೆ, “ಓಹ್ ! ದೂರ ನಿಲ್ಲಿರಿ. ಇಲ್ಲವೇ ಚಿತ್ರವನ್ನು ಸುಟ್ಟ ಬೆಂಕಿ ನನ್ನನ್ನೂ ಸುಡುವುದು!” ಎಂದು ಗಜರಿ ನುಡಿದಳು.

ಬಿಜ್ಜಳನು ನಿರುಪಾಯನಾಗಿ ಹಿಂದಕ್ಕೆ ಸರಿದನು.
ಸುಟ್ಟ ವಸ್ತುಗಳ ಕರಕನ್ನು ನೆಲಕ್ಕೆಸೆದು ಕಾಲಿಂದ ತುಳಿದು ಕಾಮೇಶ್ವರಿ,

“ಇನ್ನು ಸ್ವಾಮಿನಿಷ್ಠ ಗರುಡನಂತೆ ನನ್ನ ಬಿಡಾರದ ದಾರಿ ತೋರಿಸಿರಿ,” ಎಂದಳು.

“ಏಕಾದಶಿಯ ದಿನದಂದು ನಾನು ಕಲ್ಯಾಣಕ್ಕೆ ಪಯಣಮಾಡುವೆನು. ನೀನೂ ನನ್ನ ಸಂಗಡ ಬರಬೇಕಾಗುವುದು, ರಾಣಿ.” -ಎಂದು ಬಿಜ್ಜಳನು ಮುನ್ನೆಚ್ಚರಿಕೆ ಕೊಟ್ಟನು.

“ಮಂಗಳವೇಡೆಗೆ ಬರುವವರೆಗೆ ನಾನು ಸತಿಯಾಗಿದ್ದೆ. ನೀವು ನನ್ನನ್ನು ಅತಿಥಿಯಂತೆ ಬರಮಾಡಿಕೊಂಡು ವಂಚನೆಯಿಂದ ನನ್ನ ಸತೀತ್ವಹರಣಮಾಡಿದಿರಿ. ಈಗ ನನ್ನ ಸ್ವಾತಂತ್ರ್ಯಕ್ಕೂ ಮೊಟಕುಹಾಕಿ, ಬಂಧುಮಿತ್ರರಿಂದ ನನ್ನನ್ನು ಬೇರೆ ಮಾಡಲು ಯೋಚಿಸಿದಂತಿದೆ. ಪುರುಷನ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣಿಗೆ ಅವನ ದಾಸಿಯಂತೆ ಬಾಳನ್ನು ಸವೆಸುವುದೊಂದೇ ಉಳಿದಿರುವ ಮಾರ್ಗ,” - ಎಂದು ಕಾಮೇಶ್ವರಿ ವಿಷಣ್ಣೆಯಾಗಿ ನುಡಿದಳು.

ಬಿಜ್ಜಳನು ನಿರುತ್ತರವಾಗಿ ಸ್ವಾಮಿನಿಷ್ಠ ಸೇವಕನಂತೆ ಅವಳನ್ನು ಬಿಡಾರದ ಮುಚ್ಚಿದ ಬಾಗಿಲ ಬಳಿ ಬಿಟ್ಟು ತನ್ನ ವಾಸಗೃಹಕ್ಕೆ ಹಿಂದಿರುಗಿದನು.

***

ಬಿಡಾರದ ಬಾಗಿಲು ಮುಚ್ಚಿ ಹೊರಗೆ ಚಿಲಕ ಹಾಕಿತ್ತು. ಕಾಮೇಶ್ವರಿ ಚಿಲಕ ತೆಗೆದುಕೊಂಡು ಒಳಗೆ ಹೋದಾಗ ಉಷಾವತಿ ಎದುರಾಗಿ,

“ನೀವು ಎಲ್ಲಿಗೆ ಹೋದಿರೋ ಯಾವಾಗ ಬರುವಿರೋ ಎಂದು ಭಯದಿಂದ ನಾನು ಇಲ್ಲಿಯೆ ಕಾದು ಕುಳಿತಿದ್ದೆ, ರಾಣೀಜಿ,” -ಎಂದಳು.

“ನನ್ನ ಸರ್ವನಾಶವಾಯಿತು, ಉಷಾ. ಮಂಗಳವೇಡೆಗೆ ರಾಣಿಯಂತೆ ಬಂದ ನಾನು ಈಗ ಅಸತಿ, ಕುಲಟೆ ! ಅತಿಥಿ ಹೆಣ್ಣಿನ ಮಾನಭಂಗಕ್ಕೂ ಹೇಸದ