ಪುಟ:ಕ್ರಾಂತಿ ಕಲ್ಯಾಣ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

ನಿಮ್ಮನ್ನು ಸನ್ನಿಧಾನಕ್ಕೆ ಕರೆತರುವಂತೆ ಆಜ್ಞೆಮಾಡಿದ್ದಾರೆ. ನಾನು ಬಂದದ್ದು ಅದಕ್ಕಾಗಿ", ಎಂದನು.

ಅಗ್ಗಳನಿಗೆ ಗಗನವೇ ಕಳಚಿಬಿದ್ದಂತಾಯಿತು. ತಾನು ಯಾವ ಉದ್ದೇಶದಿಂದ ಕಲ್ಯಾಣಕ್ಕೆ ಬಂದೆನೆಂಬುದು ಬಿಜ್ಜಳರಾಯನಿಗೆ ತಿಳಿದಿರಬಹುದೆ? ತನ್ನ ಸಂಗಡಿದ್ದ ಬ್ರಹ್ಮಶಿವ ಬೊಮ್ಮರಸರ ವಿಚಾರದಲ್ಲಿ ರಾಜ್ಯದ ಬೇಹುಗಾರರ ಪಾತ್ರವೇನು? ಕ್ರಮಿತನ ಚತುರತೆಯೆಷ್ಟು? ಎಂದು ಯೋಚಿಸಿ, ಮನಸ್ಸಿನ ಕಳವಳವನ್ನು ಮುಚ್ಚಿಟ್ಟು, "ನಾನು ಈ ಪಾಂಥ ನಿವಾಸದಲ್ಲಿ ಉಳಿದಿರುವ ವಿಚಾರ ನಿಮಗೆ ತಿಳಿದದ್ದು ಹೇಗೆ?" ಎಂದು ಪ್ರಶ್ನಿಸಿದನು.

"ನೀವು ಚಾಲುಕ್ಯ ಅರಮನೆಯಲ್ಲಿ ಬಿಡಾರ ಮಾಡಿಲ್ಲವೆಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು. ಬ್ರಹ್ಮರಾಜ ಸೇಟರ ಅತಿಥಿಯಾಗಿ ಇಲ್ಲಿಗೆ ಬಂದಿರಬೇಕೆಂದು ನಿರ್ಧರಿಸಿದೆ" ಕ್ರಮಿತನು ಉತ್ತರ ಕೊಟ್ಟನು.

ಅಗ್ಗಳನ ಬುದ್ಧಿ ಚುರುಕಾಗಿ ಓಡಿತು. ಬೊಮ್ಮರಸ ಬ್ರಹ್ಮಶಿವ ಪಂಡಿತರು ತಮ್ಮ ವೇಷ ನಡೆನುಡಿಗಳಿಂದ ಎಲ್ಲರನ್ನು ವಂಚಿಸಿದ್ದಾರೆ. ಅವರ ನಿಜವಾದ ಪರಿಚಯ ಯಾರಿಗೂ ತಿಳಿದಿಲ್ಲ, ಸದ್ಯದಲ್ಲಿ ನಾನು ಅವರ ವಂಚನೆಯನ್ನು ಸಮರ್ಥಿಸಿ ಮಾತಾಡಿದರೆ ಒಳ್ಳೆಯದು ಎಂದು ನಿರ್ಧರಿಸಿಕೊಂಡು,

"ಬ್ರಹ್ಮರಾಜ ಸೇಟರೊಬ್ಬ ವಿಚಿತ್ರ ವ್ಯಕ್ತಿ. ನಾನೊಬ್ಬನೇ ಕಲ್ಯಾಣಕ್ಕೆ ಹೋಗುವೆನೆಂದು ತಿಳಿದಾಗ ತಮ್ಮ ಸಂಗಡ ಬರುವಂತೆ ಒತ್ತಾಯಪಡಿಸಿದರು. ಇಲ್ಲಿಗೆ ಬಂದಮೇಲೆ ಒಂದು ದಿನವಾದರೂ ತಮ್ಮ ಅತಿಥಿಯಾಗಿರಬೇಕೆಂದೂ, ಆಮೇಲೆ ಇಚ್ಛೆ ಬಂದಲ್ಲಿಗೆ ಹೋಗಬಹುದೆಂದೂ ಹೇಳಿದರು. ನಿರಾಕರಿಸಲು ನನ್ನಿಂದಾಗಲಿಲ್ಲ." ಎಂದನು.

"ಅವರು ದೇವಗಿರಿಗೆ ಬಂದಿದ್ದ ಕಾರಣ? ಯಾತ್ರೆಗಾಗಿಯೆ?"

"ದೇವಗಿರಿಯಲ್ಲಿ ಅವರು ಒಂದು ಬಸದಿ ಕಟ್ಟಿಸಲು ಯೋಚಿಸಿದ್ದಾರೆ. ಅದಕ್ಕಾಗಿ ಧನಸಂಗ್ರಹಿಸಲು ಅವರು ಚಾಲುಕ್ಯ ರಾಜ್ಯದ ಮುಖ್ಯ ನಗರಗಳನ್ನು ಸಂದರ್ಶಿಸಿ ದೇವಗಿರಿಗೆ ಬಂದಿದ್ದರು."

"ಅವರು ಉಜ್ಜಯಿನಿಯ ದೊಡ್ಡ ಶ್ರೀಮಂತರೆಂದು ಜನ ಹೇಳುತ್ತಾರೆ. ದೇಶಸಂಚಾರ ಮಾಡಿ ಧನ ಸಂಗ್ರಹಿಸುವ ಅಗತ್ಯವೇನಿದೆ ಅವರಿಗೆ?" ಕ್ರಮಿತನ ಪ್ರಶ್ನೆಯಲ್ಲಿ ಸಂದೇಹ ಇಣುಕುತ್ತಿತ್ತು.

"ಅವರು ಕೈಗೊಂಡಿರುವ ಕಾರ್ಯ ಒಬ್ಬರ ಹಣದಿಂದ ಮುಗಿಯುವುದಿಲ್ಲ. ಕೈಲಾಸನಾಥ ಮಂದಿರದ ಮಾದರಿಯಲ್ಲಿ ಒಂದೇ ಕಲ್ಲಿಂದ ಬಸದಿಯನ್ನು