ಪುಟ:ಕ್ರಾಂತಿ ಕಲ್ಯಾಣ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೮೭


ಪಾರ್ಶ್ವದ ಇನ್ನೊಂದು ಕೊಠಡಿಯಲ್ಲಿ ಪ್ರೇಮಾರ್ಣವ ನಿದ್ರೆ ಮಾಡುತ್ತಿದ್ದ. ದಾಸಿಯೊಬ್ಬಳು ಬಾಗಿಲಲ್ಲಿ ಕುಳಿತು ತೂಕಡಿಸುತ್ತಿದ್ದಳು. ಕಾಮೇಶ್ವರಿ ಮಂಚದ ಬಳಿ ನಿಂತು ನೆಟ್ಟ ದೃಷ್ಟಿಯಿಂದ ಅನೇಕ ಕ್ಷಣಗಳು ಮಗನ ಮುಖವನ್ನು ನೋಡುತ್ತಿದ್ದಳು. ಬಳಿಕ ಅವಳು ಬಾಲಕನ ಮಂಡೆ ಕೆನ್ನೆಗಳನ್ನು ಮೃದುವಾಗಿ ಚುಂಬಿಸಿದಳು. ಅವಳ ಅಂತರಂಗ ನೀರವವಾಗಿ ನುಡಿಯುತ್ತಿತ್ತು. :

'ನಿನ್ನ ಹಿತಾಕಾಂಕ್ಷಿಯಾಗಿ ನಾನು ನಿನ್ನಲ್ಲಿಗೆ ಕರೆತಂದೆ, ಪ್ರೇಮಾರ್ಣವ. ನಾನೊಂದು ನೆನೆದರೆ ದೈವ ಮತ್ತೊಂದು ಮಾಡಿತು. ನಮ್ಮ ಅರಸುತನದ ಆಸೆ ಮಣ್ಣುಗೂಡಿತು. ಇನ್ನು ನಿನ್ನ ರಕ್ಷಣೆಯೊಂದೇ ನನ್ನ ಏಕಮಾತ್ರ ಚಿಂತೆ' -ಎಂದು.

ಉಷಾವತಿ ಅಚ್ಚರಿಯಿಂದ ಒಡತಿಯ ಮುಖ ನೋಡಿದಳು, ತಾಯೊಲ್ಮೆಯ ಆ ಶಬ್ದಹೀನ ನುಡಿಗಳನ್ನು ಕೇಳಿದವಳಂತೆ.

“ನಾನು ಏಕಾಂತವನ್ನು ಬಯಸುತ್ತೇನೆ ಉಷಾ. ಪುನಃ ಕರೆಯುವವರೆಗೆ ನೀನಿಲ್ಲಿಯೇ ಇರು,”-ಎಂದು ಹೇಳಿ ಕಾಮೇಶ್ವರಿ ಮೆಲ್ಲನೆ ನಡೆಯುತ್ತ ವಾಸಗೃಹಕ್ಕೆ ಹೋದಳು.

ಅಲ್ಲಿ ಅವಳು ಮಂಚದ ಮೇಲೆ ದಿಂಬುಗಳಿಗೆ ಒರಗಿ ಕುಳಿತು, ಕೈಯಲ್ಲಿ ಹಲಿಗೆ ಬಳಪಗಳನ್ನು ಹಿಡಿದು, ಅಂದಿನ ಘಟನೆಗಳಿಂದ ತನಗಾದ ಲಾಭ-ನಷ್ಟಗಳ ಎಣಿಕೆಗೆ ತೊಡಗಿದಳು-

“ಕ್ಷೀಣಬಲರಾದ ಸಾಮಂತರ ನೆರವಿನಿಂದ ಚಾಲುಕ್ಯ ಅರಸೊತ್ತಿಗೆಗಾಗಿ ಸಂಧಾನ ನಡೆಸಲು ಮಂಗಳವೇಡೆಗೆ ಬಂದ ನಾನು ಈಗ ಬಿಜ್ಜಳನ ಪ್ರಣಯಿನಿ. ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರವನ್ನು ಸಂಚು ಹೋರಾಟಗಳಿಲ್ಲದೆ ಈಗ ಎಲ್ಲರೂ ಒಪ್ಪಿಕೊಳ್ಳುವರು. ಪ್ರೇಮಾರ್ಣವನು ಪ್ರಾಪ್ತ ವಯಸ್ಕನಾಗುವವರೆಗೆ ನಾನು ರಾಜಪ್ರತಿನಿಧಿ ಆಗುವೆನು. ರಾಜ್ಯದಲ್ಲಿ ಶಾಂತಿ ಭದ್ರತೆಗಳನ್ನು ಕಾಪಾಡಲು ಬಿಜ್ಜಳನಂತಹ ದಕ್ಷ ಸೇನಾನಿಯ ಸಹಾಯ ದೊರಕುತ್ತದೆ. ಪಗಡೆಯಾಟದಲ್ಲಿ ನಾನು ಗೆದ್ದ ರಾಜ್ಯ ಕೋಶಗಳ ರಕ್ಷಣೆಗೆ ಇದ್ದ ಒಂದೇ ಒಂದು ಆತಂಕ ಇಂತಹ ವಿಚಿತ್ರ ರೀತಿಯಲ್ಲಿ ಪರಿಹಾರವಾಗುವುದೆಮದು ಯಾರು ತಿಳಿದಿದ್ದರು? ಇದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ.” ಎಂದು ನುಡಿಯಿತು ಅವಳ ಆಶಾವಾದಿ, ಪತನಶೀಲ, ವಿಲಾಸ ಪ್ರವೃತ್ತಿ.

“ಇದಕ್ಕಾಗಿ ನೀನು ಕೊಡಬೇಕಾದ ಬೆಲೆಯೇನು? ಅದನ್ನು ಲೆಕ್ಕ ಹಾಕಿದೆಯಾ, ಹುಚ್ಚು ಹೆಣ್ಣೆ ?” -ಎಂದು ಮತ್ತೆ ಪ್ರಶ್ನಿಸಿತು ಅವಳ ವಿವೇಕ.

ನಿನ್ನ ಬಗೆಗೆ ಅನೇಕ ಅಪವಾದಗಳು ಪ್ರಚಾರದಲ್ಲಿದ್ದರೂ, ನೀನು