ಪುಟ:ಕ್ರಾಂತಿ ಕಲ್ಯಾಣ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೩

ನಿನ್ನ ಮಗು, ತಂಗಿ!” ಎಂದು ಉಷಾವತಿಗೆ ಹೇಳಿದಳು.

ಅವರು ಕಾಮೇಶ್ವರಿಯ ಪಾದಗಳಿಗೆರಗಿ, ಬೀಳ್ಗೊಂಡು, ಬಿಡಾರದ ಕೆಳಗೆ ಊಳಿಗದವರಿಗಾಗಿ ಗೊತ್ತಾಗಿದ್ದ ಬಾಗಿಲಿಂದ ಹೊರಗೆ ಹೋದರು. ಅಲ್ಲಿದ್ದ ಕಾವಲು ಭಟನು ಅವರನ್ನು ಊಳಿಗದವರೆಂದೇ ತಿಳಿದು ತಡೆಯಲಿಲ್ಲ.

ರಾಣಿ ಕಾಮೇಶ್ವರಿ ವಾತಾಯನದ ತೆರೆಯ ಹಿಂದೆ ನಿಂತು ಉದ್ಯಾನವನ್ನು ಹಾದು ಅವರು ರಾಜಮಾರ್ಗದಲ್ಲಿ ಕಣ್ಮರೆ ಆಗುವವರೆಗೆ ನೋಡುತ್ತಿದ್ದಳು.

ಹೊದರ ಮರೆಯಿಂದ ಪುರುಷನೊಬ್ಬನು ಹೊರಗೆ ಬಂದು ಅವಸರದ ಹೆಜ್ಜೆಗಳಿಂದ ಉಷಾವತಿ ಪ್ರೇಮಾರ್ಣವರನ್ನು ಹಿಂಬಾಲಿಸಿ ಹೋದದ್ದನ್ನು ಕಾಮೇಶ್ವರಿ ನೋಡಲಿಲ್ಲ.

ಮಂಗಳವೇಡೆಯ ಮಹಾಮಂಡಲೇಶ್ವರ ಕುಮಾರ ಸೋಮೇಶ್ವರನ ಪಟ್ಟಾಭಿಷೇಕದ ಅಂಗವಾಗಿ, ದಶಮಿಯಂದು, ನಗರದ ಹೊರಗಿದ್ದ ಬನ್ನಿ ಮಂಟಪಕ್ಕೆ ಹೋಗುತ್ತಿದ್ದ ಮೆರವಣಿಗೆ ನಗರದ ಮಹಾದ್ವಾರವನ್ನು ದಾಟುತ್ತಿದ್ದಂತೆ ಅಶ್ವಾರೋಹಿಯಾದ ಅವಸರದ ಭಟನೊಬ್ಬನು ಬಿಜ್ಜಳನನ್ನು ಹುಡುಕುತ್ತ ಅಲ್ಲಿಗೆ ಬಂದನು.

ಕುಮಾರ ಸೋಮೇಶ್ವರನು ಕುಳಿತಿದ್ದ ಅಂಬಾರಿಯ ಮುಂಭಾಗದಲ್ಲಿ, ಸಾಮಂತರ ನಡುವೆ, ಅಲಂಕೃತವಾದ ದಿವ್ಯಾಶ್ವವನ್ನೇರಿ ಹೋಗುತ್ತಿದ್ದ ಬಿಜ್ಜಳನನ್ನು ಕೂಡಲೆ ನೋಡುವುದು ಭಟನಿಗೆ ಸಾಧ್ಯವಾಗಲಿಲ್ಲ. ಸಾಮಂತರ ಹಿಂದೆ ಮೆರವಣಿಗೆಯ ಅಂಚಿನಲ್ಲಿದ್ದ ಸಮ್ಮುಖದ ಪಸಾಯಿತನನ್ನು ಕರೆದು ಅವನು "ಸರ್ವಾಧಿಕಾರಿಗಳಿಗೆ ಈಗಲೇ ತಿಳಿಸಬೇಕಾದ ಅವಸರದ ಸುದ್ದಿಯಿದೆ" ಎಂದನು.

"ಸುದ್ದಿ ಏನೆಂದು ತಿಳಿಸಿದರೆ ಒಡೆಯರಿಗೆ ಅರಿಕೆ ಮಾಡುತ್ತೇನೆ."—ಪಸಾಯಿತನೆಂದನು.

"ಪ್ರಭುಗಳಿಗೆ ರಹಸ್ಯವಾಗಿ ತಿಳಿಸಬೇಕಾದ ವಿಚಾರವನ್ನು ಎಲ್ಲರ ಮುಂದೆ ಹೇಳುವುದೇ?” -ಎಂದು ಭಟನು ನಿರಾಕರಿಸಿದನು.

ಪಸಾಯಿತನು ಚತುರತೆಯಿಂದ ಕುದುರೆಯನ್ನು ನಡೆಸಿ ಬಿಜ್ಜಳನ ಪಾರ್ಶ್ವಕ್ಕೆ ಹೋಗಲು ಸ್ವಲ್ಪ ಹೊತ್ತಾಯಿತು. ಅವಸರದ ಭಟನೊಬ್ಬನು ರಹಸ್ಯವಾರ್ತೆ ತಂದಿರುವುದಾಗಿ ಕೇಳುತ್ತಲೇ ಬಿಜ್ಜಳನು ಮೆರವಣಿಗೆಯನ್ನು ಬಿಟ್ಟು ಪಾರ್ಶ್ವಕ್ಕೆ ಬಂದು ಕುದುರೆಯನ್ನು ನಿಲ್ಲಿಸಿದನು.

ಸಮಯಕ್ಕಾಗಿ ಕಾಯುತ್ತಿದ್ದ ಭಟನು ಹತ್ತಿರ ಬಂದು, "ಚಾಲುಕ್ಯರಾಣಿ ಕಾಮೇಶ್ವರೀ ದೇವಿಯವರಿದ್ದ ಬಿಡಾರಕ್ಕೆ ಬೆಂಕಿ ಬಿದ್ದಿದೆ. ಇದನ್ನು ನಿಮಗೆ