ಪುಟ:ಕ್ರಾಂತಿ ಕಲ್ಯಾಣ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೪

ಕ್ರಾಂತಿ ಕಲ್ಯಾಣ

ರಹಸ್ಯವಾಗಿ ತಿಳಿಸಲು ಮನೆಹೆಗ್ಗಡೆ ಕಳುಹಿಸಿದರು." ಎಂದು ಹೇಳಿದನು.

"ಬೆಂಕಿ ಬಿದ್ದದ್ದು ಹೇಗೆ? ರಾಣಿ ಎಲ್ಲಿದ್ದಾರೆ,"
ಬಿಜ್ಜಳನು ಆತುರದಿಂದ ಕೇಳಿದನು.
"ಅದೊಂದೂ ನನಗೆ ತಿಳಿಯದು, ಪ್ರಭೂ."

ಬಿಜ್ಜಳನು ಕುದುರೆಯನ್ನು ನಗರಾಭಿಮುಖವಾಗಿ ಓಡಿಸಿದನು. ಮೆರವಣಿಗೆಯಲ್ಲಿದ್ದ ಸಾಮಂತರು ಚಕಿತರಾಗಿ ನೋಡಿದರು. ಪ್ರಭುವಿನ ಹಿಂದೆ ಹೋಗಲು ಅವರಲ್ಲಿ ಯಾರಿಗೂ ಧೈರ್ಯವಿರಲಿಲ್ಲ. ರಾಜಪುರೋಹಿತ ನಾರಣಕ್ರಮಿತನು ಭಟನ ಬಳಿಗೆ ಬಂದು, "ಪ್ರಭುಗಳು ಎಲ್ಲಿಗೆ ಹೋದರು?" ಎಂದು ಕೇಳಿದಾಗ ಭಟನು ಸಮಯ ಸ್ಫೂರ್ತಿಯಿಂದ, "ಮೆರವಣಿಗೆ ಮುಂದೆ ಸಾಗಬೇಕೆಂದೂ, ತಾವು ಬೇಗ ಬರುವುದಾಗಿಯೂ ಪ್ರಭುಗಳು ಹೇಳಿದರು," ಎಂದು ಉತ್ತರಿಸಿ ಕುದುರೆಯನ್ನೋಡಿಸಿಕೊಂಡು ಬಿಜ್ಜಳನನ್ನು ಹಿಂಬಾಲಿಸಿದನು.

ಮೆರವಣಿಗೆ ಬನ್ನಿ ಮಂಟಪಕ್ಕೆ ಬಂದಾಗ ನಗರ ಮಧ್ಯದಲ್ಲಿ ಹೊಗೆ ಪರ್ವತಾಕಾರವಾಗಿ ಮೇಲೇಳುತ್ತಿರುವುದನ್ನು ಜನರು ಕಂಡು ನಗರದಲ್ಲೆಲ್ಲಿಯೋ ಅಗ್ನಿಘಾತವಾಗಿರಬೇಕೆಂದು ತಿಳಿದರು. ಕುಮಾರ ಸೋಮೇಶ್ವರನು ಸುದ್ದಿ ತಿಳಿದು ಬರಲು ಸೈನಿಕರಿಬ್ಬರನ್ನು ನಗರಕ್ಕೆ ಕಳುಹಿಸಿದನು.

ಬಿಜ್ಜಳನು ಅರಮನೆಯ ಬಳಿಗೆ ಬಂದಾಗ ಉಪ್ಪರಿಗೆಯ ಎಲ್ಲ ಕಡೆ ಬೆಂಕಿಹರಡಿತ್ತು. ಭಟರು, ಊಳಿಗದವರು, ನಾಗರಕರು, ಮನೆಹೆಗ್ಗಡೆಯ ನೇತೃತ್ವದಲ್ಲಿ ಬೆಂಕಿಯನ್ನಾರಿಸಲು ಪ್ರಯತ್ನಿಸುತ್ತಿದ್ದರು.

ಪ್ರಯತ್ನ ವಿಫಲವೆಂದು ಬಿಜ್ಜಳನಿಗೆ ತಿಳಿದಿತ್ತು. ಆಗಿನ ವಾಸ್ತು ಪದ್ಧತಿಯಂತೆ ಅರಮನೆಯ ಉಪ್ಪರಿಗೆ ಮರದ ಕಂಬ ಹಲಗೆಗಳಿಂದ ರಚಿತವಾಗಿತ್ತು. ಬೆಂಕಿಯಿಂದ ಅದನ್ನು ಉಳಿಸಬಹುದಾದ ಉಪಾಯಗಳೊಂದೂ ಇರಲಿಲ್ಲ.

ಬಿಜ್ಜಳನು ಮನೆಹೆಗ್ಗಡೆಯನ್ನು ಕರೆದು, "ಉಪ್ಪರಿಗೆಯ ಬೆಂಕಿಯನ್ನಾಗಿಸುವುದು ಯಾರಿಗೂ ಸಾಧ್ಯವಿಲ್ಲ. ಕೆಳಗಿನ ಅಂತಸ್ತಿನಲ್ಲಿರುವ ವಸ್ತು ಸಂಗ್ರಹಗಳನ್ನು ಈಚೆಗೆ ತೆಗೆಸಿ ಪಾರ್ಶ್ವದ ಕಟ್ಟಡಗಳಿಗೆ ಬೆಂಕಿ ಹರಡದಂತೆ ನೋಡಿಕೊಳ್ಳಿರಿ," ಎಂದು ಆಜ್ಞೆ ಮಾಡಿದನು.

ಅದರಂತೆ ಕಾರ್ಯಾರಂಭಮಾಡಿ ಮನೆಹೆಗ್ಗಡೆ ಹಿಂದಿರುಗಿದಾಗ ಬಿಜ್ಜಳನು "ಬೆಂಕಿ ಬಿದ್ದದ್ದು ಹೇಗೆ?" ಎಂದು ಕೇಳಿದನು.

"ಬೆಂಕಿ ಹೇಗೆ ಪ್ರಾರಂಭವಾಯಿತೆಂದು ಯಾರಿಗೂ ತಿಳಿಯದು, ಮಹಾಪ್ರಭು," ಹೆಗ್ಗಡೆ ಹೇಳಿದನು. "ಚಾಲುಕ್ಯ ರಾಣಿಯವರಿದ್ದ ಬಿಡಾರದಲ್ಲಿ ಮೊದಲು ಬೆಂಕಿ