ಪುಟ:ಕ್ರಾಂತಿ ಕಲ್ಯಾಣ.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೯

೪. ಮಾನವನು ದಾನವನಾದಾಗ

ಹರಳಯ್ಯ ಮಧುವರಸರ ಮೇಲೆ ವರ್ಣಸಂಕರದ ಆಪಾದನೆ ಹೊರಿಸಿ ನಾಗರಿಕರು ಸಲ್ಲಿಸಿದ್ದ ಮನವಿ ಪತ್ರದ ವಿಚಾರಣೆ ನಡೆಸಲು ಬಿಜ್ಜಳನು ನೇಮಿಸಿದ ನಿಪುಣರ ಸಮಿತಿ, ಅನೇಕ ವಾರಗಳು ಕಳೆದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಆಗ ಪ್ರಚಾರದಲ್ಲಿದ್ದ ನಿರಂಕುಶ ಆಡಳಿತ ಪದ್ಧತಿ ಇದರ ಕಾರಣವಾಗಿತ್ತು.

ಅಗತ್ಯವಿರಲಿ, ಇಲ್ಲದಿರಲಿ, ಪರಿಸ್ಥಿತಿಯ ಪ್ರಭಾವಕ್ಕೆ ಸಿಕ್ಕು, ಜನಪ್ರಿಯತೆಯನ್ನು ಗಳಿಸುವ ಏಕಮಾತ್ರ ಉದ್ದೇಶದಿಂದ ಇಂತಹ ಸಮಿತಿಗಳನ್ನು ರಚಿಸಲು ಬಿಜ್ಜಳನು ಮೊದಲು ಮಾಡಿದ್ದನು. ಬಹುತೇಕ ಸಂದರ್ಭಗಳಲ್ಲಿ ಆ ಸಮಿತಿಗಳು ಆಕಾಶ ಕುಸುಮಗಳಂತೆ ಬಯಲಲ್ಲಿ ಹುಟ್ಟಿಬಯಲಲ್ಲಿ ಅಳಿಯುತ್ತಿದ್ದವು. ಇಲ್ಲವೆ ಯಾವ ಬಗೆಯ ಪ್ರಚಾರ ಪ್ರಯೋಜನಗಳಿಲ್ಲದೆ ಒಂದೆರಡು ಸಾರಿ ಸಭೆ ನಡಸಿ, ಎಣ್ಣೆ ಮುಗಿದ ದೀಪದಂತೆ ಆರಿಹೋಗುತ್ತಿದ್ದವು. ಅಪರೂಪವಾಗಿ ಇಂತಹ ಸಮಿತಿಯೊಂದು ವಿಚಾರಣೆಯನ್ನು ಮುಂದುವರಿಸಿ ದೀರ್ಘಕಾಲಾನಂತರ ಸಲ್ಲಿಸುತ್ತಿದ್ದ ವರದಿ, ಸಮಯ ಸನ್ನಿವೇಶಗಳ ಬದಲಾವಣೆಯಿಂದ ನಿರುಪಯುಕ್ತವಾಗುತ್ತಿದ್ದುವು.

ವಿಚಾರಣೆ ನಡೆಸಲಿ ನಡೆಸದಿರಲಿ, ವರದಿ ಮಾಡಲಿ ಮಾಡದಿರಲಿ, ಸಮಿತಿಯ ಸದಸ್ಯರಿಗೆ ಗೊತ್ತಾದ ಸಂಭಾವನೆ ರಾಜ್ಯಭಂಡಾರದಿಂದ ಯಥಾಕಾಲದಲ್ಲಿ ಸಂದಾಯವಾಗುತ್ತಿತ್ತು. ದಕ್ಷತೆಯಿಂದ ಕೂಡಿದ್ದರೂ ವಾಸ್ತವದಲ್ಲಿ ಜನರಿಗೆ ಅಪ್ರಿಯವಾಗಿದ್ದ ತನ್ನ ನಿರಂಕುಶಾಡಳಿತದ ಅನ್ಯಾಯ ಅತ್ಯಾಚಾರಗಳನ್ನು ಲೋಕದ ಕಣ್ಣಿನಿಂದ ಮುಚ್ಚಿಡಲು ಬಿಜ್ಜಳನು ಈ ಸಮಿತಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದನು.

ಮಂತ್ರಿಮಂಡಲದ ಸಚಿವರು, ರಾಜ್ಯದ ಹಿರಿಯ ಅಧಿಕಾರಿಗಳು ಈ ರಹಸ್ಯವನ್ನು ತಿಳಿದಿದ್ದರೂ, ಸ್ವಾರ್ಥವಶರಾಗಿ ತಟಸ್ಥರಾಗಿರುತ್ತಿದ್ದರು. ಅಧಿಕಾರ ಲೋಭ ಅವರನ್ನು ಮೂಕರನ್ನಾಗಿ ಮಾಡಿತ್ತು.

ಬಿಜ್ಜಳನ ಇತರ ಸಮಿತಿಗಳಂತೆ ಅಂದಿನ ಅಗತ್ಯದ ಪೂರೈಕೆಗಾಗಿ, ವರ್ಣ ಸಂಕರ ನಡೆಯಿತೇ ಇಲ್ಲವೇ ಎಂಬುದನ್ನು ನಿರ್ಣಯಿಸಲು ನೇಮಕವಾದ