ಪುಟ:ಕ್ರಾಂತಿ ಕಲ್ಯಾಣ.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೦

ಕ್ರಾಂತಿ ಕಲ್ಯಾಣ


ನಿಪುಣರ ಸಮಿತಿಯೂ ಯಥಾಕಾಲದಲ್ಲಿ ಅಕಾಲ ಮೃತ್ಯುವಿಗೀಡಾಗುವುದೆಂದು ಭಾವಿಸಿ ಮಂತ್ರಿಮಂಡಲದ ಹಿರಿಯ ಸಚಿವ ಮಂಚಣನಾಯಕನು ಉಪೇಕ್ಷೆಯಿಂದ ಆ ವಿಚಾರವನ್ನೇ ಮರೆತಿದ್ದನು. ಮಂಗಳವೇಡೆಯಿಂದ ನಾರಣಕ್ರಮಿತನು ಹಿಂದಿರುಗಿ, ಮರುದಿನ ಸಮಿತಿಯ ಸಭೆ ನಡೆಯುವುದಾಗಿ ಹೇಳಿಕಳುಹಿಸಿದಾಗ ಮಂಚಣನಿಗೆ ನಿಜವಾಗಿ ಆಶ್ಚರ್ಯವಾಯಿತು.

ಆ ದಿನ ಅಪರಾಹ್ನ ಮೊದಲ ಪ್ರಹರದ ಗಂಟೆ ಹೊಡೆಯುತ್ತಿದ್ದಂತೆ ರಾಜಧಾನಿ ಕಲ್ಯಾಣದ ಧರ್ಮಾಧಿಕರಣದ ಚಾವಡಿಯಲ್ಲಿ ಸಮಿತಿ ಕೂಡಿತು. ಮಂಚಣ ರುದ್ರಭಟ್ಟರು ಮಾತ್ರವೇ ಸಭೆಗೆ ಬಂದಿದ್ದರು. ನಾರಣಕ್ರಮಿತನು ಅವರನ್ನು ಉಚಿತಾಸನಗಳಲ್ಲಿ ಕುಳ್ಳಿರಿಸಿ,

“ಮಾಘ ಬಹುಳ ಚೌತಿಯಂದು ಸರ್ವಾಧಿಕಾರಿಗಳು ನಗರಕ್ಕೆ ಹಿಂದಿರುಗುತ್ತಾರೆ. ಅಷ್ಟರಲ್ಲಿ ನಮ್ಮ ವಿಚಾರಣೆ ಮುಗಿದು ವರದಿ ಸಿದ್ಧವಾಗಬೇಕೆಂದು ಆಜ್ಞೆಯಾಗಿದೆ,” ಎಂದು ಹೇಳಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮುಂದಿಟ್ಟನು.

“ಇಂದು ಪಾಡ್ಯ, ಇನ್ನು ಮೂರು ದಿನದಲ್ಲಿ ನಾವು ವಿಚಾರಣೆ ಮುಗಿಸಿ ವರದಿ ಕಳುಹಿಸುವುದು ಸಾಧ್ಯವೆ? ಇಷ್ಟು ದಿನಗಳು ಸುಮ್ಮನಿದ್ದು ಈಗ ಈ ಅವಸರವೇಕೆ? -ಎಂದು ಮಂಚಣನಾಯಕನು ಪ್ರಶ್ನಿಸಿದನು.

“ನಾವು ಇಷ್ಟು ದಿವಸಗಳು ಸುಮ್ಮನಿದ್ದದ್ದು ಪ್ರಭುಗಳ ತೀವ್ರ ಅಸಮಾಧಾನದ ಕಾರಣ. ಮಂಗಳವೇಡೆಯಲ್ಲಿ ಘಟಿಸಿದ ಅರಮನೆಯ ಅಗ್ನಿಕಾಂಡದಿಂದ ಅವರ ಪ್ರಕೃತಿಯೇ ಬದಲಾಯಿಸಿದೆ. ಮರಿಗಳನ್ನು ಕಳೆದುಕೊಂಡ ಹೆಣ್ಣು ಹುಲಿಯಾಗಿದ್ದಾರೆ ಈಗವರು. ಆಜ್ಞೆಯಂತೆ ಮೂರು ದಿನಗಳಲ್ಲಿ ವಿಚಾರಣೆ ಮುಗಿಸಿ ವರದಿ ಒಪ್ಪಿಸದೆ ಹೋದರೆ ನಾವು ಉಗ್ರ ದಂಡನೆಗೆ ಗುರಿಯಾಗಬೇಕಾಗುವುದು,” -ಎಂದು ನುಡಿದು ಕ್ರಮಿತನು ಸಹೋದ್ಯೋಗಿಗಳ ಕಡೆಗೆ ಸಹಕಾರದ ದೃಷ್ಟಿ ಬೀರಿದನು.

“ಅಗ್ನಿ ಅಪಘಾತದಲ್ಲಿ ಚಾಲುಕ್ಯರಾಣಿ ಮಡಿದಳೆಂದು ನಗರದಲ್ಲಿ ಸುದ್ದಿ ಹರಡಿರುವುದು ನಿಜವೆ?” -ಅವಕಾಶ ದೊರೆತು ರುದ್ರಭಟ್ಟನು ಕೇಳಿದನು. ಮಂಗಳವೇಡೆಯ ಘಟನೆಗಳನ್ನು ಕುರಿತು ಕಲ್ಯಾಣದಲ್ಲಿ ಹರಡಿದ್ದ ಚಿತ್ರ ವಿಚಿತ್ರ ವಾರ್ತೆಗಳು ಆ ನ್ಯಾಯಶಾಸ್ತಿಯನ್ನು ಅಚ್ಚರಿಗೊಳಿಸಿದ್ದವು.

“ಅಪಘಾತದಲ್ಲಿ ರಾಣಿಯವರು ಮಡಿದದ್ದೇ ನಮ್ಮ ಎಲ್ಲ ತೊಂದರೆಗಳಿಗೂ ಕಾರಣ, ರುದ್ರಭಟ್ಟರೆ. ಪಟ್ಟಾಭಿಷೇಕದ ಆನಂದ ಕೋಲಾಹಲ ಕಣ್ಣೀರಲ್ಲಿ ಮುಗಿಯುವುದೆಂದು ಯಾರು ಭಾವಿಸಿದ್ದರು !” –ಕ್ರಮಿತನು ಭಾವಾವೇಶದಿಂದ ಉತ್ತರಕೊಟ್ಟನು.