ಪುಟ:ಕ್ರಾಂತಿ ಕಲ್ಯಾಣ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೨

ಕ್ರಾಂತಿ ಕಲ್ಯಾಣ

ಧರ್ಮಾಧಿಕರಣದ ಶ್ರೇಷ್ಠ ಅಧಿಕಾರಿ. ಅಗ್ನಿಕಾಂಡದ ಎಲ್ಲ ವಿವರಗಳು ನಿಮಗೆ ತಿಳಿದಿದೆ. ನಾಗರಿಕರ ಸಭೆ ಕರೆದು ವಾಸ್ತವಾಂಶಗಳನ್ನು ಪ್ರಕಟಿಸಿದರೆ ಅಪಪ್ರಚಾರಕರ ಬಾಯಿ ಮುಚ್ಚಿದಂತಾಗುವುದು."

ರುದ್ರಭಟ್ಟನ ಉತ್ತರದಿಂದ ಕ್ರಮಿತನ ಅಚ್ಚರಿ ಇಮ್ಮಡಿಸಿತು. ಇದು ಸದುದ್ದೇಶದಿಂದ ಕೂಡಿದ ಆಪ್ತವಾಕ್ಯವೇ, ಅಥವಾ ವ್ಯಂಗ್ಯವಾಗಿ ನಿಂದಿಸುವ ವಿಡಂಬನೆಯೇ ಎಂಬುದನ್ನು ನಿರ್ಧರಿಸಲು ಅಸಮರ್ಥನಾಗಿ, ತಿರಸ್ಕಾರದ ನಗೆ ಹಾರಿಸಿ,

"ನಿಮ್ಮ ಸಲಹೆ ವಿಚಿತ್ರವಾಗಿದೆ, ರುದ್ರಭಟ್ಟರೆ. ನ್ಯಾಯಶಾಸ್ತ್ರದಲ್ಲಿ ಪಾಂಡಿತ್ಯಗಳಿಸುವ ಪರಿಶ್ರಮದಲ್ಲಿ ನೀವು ಲೋಕ ವ್ಯವಹಾರವನ್ನೇ ಮರೆತಂತಿದೆ. ಅಪಪ್ರಚಾರಕರ ಬಾಯಿ ಮುಚ್ಚಲು ಧರ್ಮಾಧಿಕರಣದ ವಿವರಣೆಗಿಂತ ರಾಜಭಟರ ಕೊರಡೆಯೇಟು ಹೆಚ್ಚು ಉಪಯುಕ್ತ. ಬಿಜ್ಜಳರಾಯರು ಚಾಲುಕ್ಯರಾಣಿಯನ್ನು ಅತ್ಯಂತ ಗೌರವದಿಂದ ಸ್ವಾಗತಿಸಿ ಸತ್ಕರಿಸಿದರು. ಚಾಲುಕ್ಯ ಅರಸೊತ್ತಿಗೆಗೆ ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರವನ್ನು ಅಂಗೀಕರಿಸಿ, ಅವನು ಪ್ರಾಪ್ತವಯಸ್ಕನಾಗುವವರೆಗೆ ರಾಣಿಯನ್ನು ರಾಜಪ್ರತಿನಿಧಿಯಾಗಿ ನೇಮಿಸುವುದು ಪ್ರಭುಗಳ ಇಚ್ಛೆಯಾಗಿತ್ತು. ಕಲ್ಯಾಣಕ್ಕೆ ಹಿಂದಿರುಗಿ ಶುಭ ದಿನದಲ್ಲಿ ಕುಮಾರ ಪ್ರೇಮಾರ್ಣವನ ಪಟ್ಟಾಭಿಷೇಕ ನಡೆಸಲು ಅವರು ಯೋಚಿಸಿದ್ದರು. ಆ ರೀತಿ ನಡೆದಿದ್ದರೆ ಈ ಸಮಿತಿಯ ವಿಚಾರವನ್ನೇ ಪ್ರಭುಗಳು ಮರೆಯುತ್ತಿದ್ದರು. ರಾಣಿ ಕಾಮೇಶ್ವರೀ ದೇವಿಯವರ ಅಪಮೃತ್ಯುವೇ ನಮ್ಮ ತೊಂದರೆಗಳಿಗೆ ಕಾರಣ," ಎಂದನು.

ಈ ಮಾತುಗಳನ್ನು ಮೌನವಾಗಿ ಕೇಳುತ್ತಿದ್ದ ಮಂಚಣ್ಣನಾಯಕನು ಎದುರಿಗಿದ್ದ ದಾಖಲೆಗಳಿಂದ ಸಮಿತಿಯ ನೇಮಕಕ್ಕೆ ಸಂಬಂಧಿಸಿದ ನಿರೂಪವನ್ನು ಪ್ರತ್ಯೇಕಿಸಿ,

"ಪ್ರಭುಗಳ ಆಜ್ಞೆಯಂತೆ ಚಾಲುಕ್ಯರಾಜ್ಯದ ಶೈವಮಠಗಳು, ಹದಿನೆಂಟು ಅಗ್ರಹಾರಗಳು, ರಾಜಧಾನಿಯ ವೀರ ಬಣಂಜು ಸಂಘ, ಇವುಗಳಿಂದ ನಾವು ಒಬ್ಬೊಬ್ಬ ಪ್ರತಿನಿಧಿಯನ್ನು ತೆಗೆದುಕೊಂಡು ಸಮಿತಿಯನ್ನು ಪೂರೈಸಬೇಕು. ಆ ಕಾರ್ಯ ಮೊದಲು ನಡೆಯಲಿ ಆಮೇಲೆ ವಿಚಾರಣೆ," ಎಂದನು.

ಕ್ರಮಿತನ ಮುಖ ಮಿದುನಗೆಯಿಂದ ಅರಳಿತು. "ಪ್ರಭುಗಳು ಈ ವಿಚಾರವನ್ನು ಮೊದಲು ಯೋಚಿಸಿ, ಅದರ ಪರಿಹಾರಕ್ಕಾಗಿ ಹೊಸ ಕಾರ್ಯಕ್ರಮವನ್ನು ರಚಿಸಿದ್ದಾರೆ, ಮಂಚಣನಾಯಕರೆ, ಇದು ಅವರ ನಿರೂಪ." ಎಂದು ಅವನು ಎದುರಿಗಿದ್ದ ದಾಖಲೆಗಳಿಂದ ಪತ್ರವೊಂದನ್ನು ತೆಗೆದು ಮಂಚಣನಿಗೆ ಕೊಟ್ಟನು.