ಪುಟ:ಕ್ರಾಂತಿ ಕಲ್ಯಾಣ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೦೩


ಹೊಸ ಆಜ್ಞೆಯಲ್ಲಿ ಬಿಜ್ಜಳನು ನಿಪುಣರ ಸಮಿತಿಯನ್ನು ತಾತ್ಕಾಲಿಕ ನ್ಯಾಯಾಸ್ಥಾನವಾಗಿ ಮಾರ್ಪಡಿಸಿ, 'ಚಾಲುಕ್ಯ ರಾಜ್ಯದಲ್ಲಿ ನಡೆದಿರುವುದಾಗಿ ಹೇಳುವ ಈ ವರ್ಣಸಂಕರಕ್ಕೆ ಸಂಬಂಧಿಸಿದ ಆಪಾದಿತರನ್ನು, ಸಾಕ್ಷಿಗಳನ್ನು ಕರೆಸಿಕೊಂಡು ವಿಚಾರಣೆಮಾಡಿ ಮೂರು ದಿನಗಳ ಅವಧಿಯಲ್ಲಿ ವರದಿ ಮಾಡಬೇಕೆಂದು" ಆಜ್ಞೆ ಮಾಡಿದ್ದನು.

ನಿರೂಪದ ವ್ಯಾಪ್ತಿ ಉದ್ದೇಶಗಳನ್ನು ಅರಿತುಕೊಳ್ಳಲು ಅವಕಾಶ ಕೊಟ್ಟು ಕ್ರಮಿತನು,

“ಈ ನಿರೂಪದಂತೆ ವಿಚಾರಣೆಯನ್ನು ತ್ವರಿತಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ನನಗೆ ಅಗತ್ಯವಾಯಿತು. ಅದನ್ನು ನೀವು ಅನುಮೋದಿಸುವಿರೆಂದು ನಂಬಿದ್ದೇನೆ,” ಎಂದನು.

ಮಂಚಣನು ಅಷ್ಟಕ್ಕೇ ಬಿಡಲಿಲ್ಲ. “ನೀವು ಕೈಗೊಂಡ ಕ್ರಮಗಳೇನೆಂಬುದನ್ನು ಮೊದಲು ತಿಳಿಸಿರಿ, ಕ್ರಮಿತರೆ. ಆಮೇಲೆ ಅನುಮೋದನೆಯ ವಿಚಾರ,” ಎಂದು ಅವನು ಮತ್ತೆ ಹೇಳಿದನು.

“ತಿಳಿಸುತ್ತೇನೆ, ಮಂಚಣನಾಯಕರೆ. ಕಣ್ಣು ಕಟ್ಟಿ ನಿಮ್ಮನ್ನು ಹಳ್ಳಕ್ಕೆ ತಳ್ಳುವೆನೆಂದು ಭಾವಿಸಿದಿರಾ? ಈ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ಆಪಾದಿತರನ್ನು ಬಂಧನದಲ್ಲಿಡಲು ಪ್ರಭುಗಳು ಆಜ್ಞೆ ಮಾಡಿದ್ದಾರೆ. ಧರ್ಮಾಧಿಕರಣದ ಅಧಿಕಾರಿಯಾಗಿ ನಾನು ಅದನ್ನು ಕಾರ್ಯಗತ ಮಾಡಿದ್ದೇನೆ.” -ಎಂದು ಕ್ರಮಿತನು ಹರಳಯ್ಯ ಮಧುವರಸರ ಬಂಧನ ಆಜ್ಞೆಯನ್ನು ಮುಂದಿಟ್ಟನು.

“ಮಂಗಳವೇಡೆಯಿಂದ ರಾಜಾಜ್ಞೆಗಳ ಕಟ್ಟನ್ನೇ ತಂದಂತಿದೆ, ರಾಜಪುರೋಹಿತರು! ಎಲ್ಲವನ್ನೂ ಒಂದೇ ಸಾರಿಗೆ ಹೊರಗಿಟ್ಟರೆ ನಮ್ಮ ಭವಿಷ್ಯವನ್ನೂ ತಿಳಿದಂತಾಗುವುದು.” ....ಕುದಿಯುತ್ತಿದ್ದ ಅಸಮಾಧಾನವನ್ನು ಮುಚ್ಚಿದ್ದು ಮಂಚಣನೆಂದನು.

“ಇದರೊಂದಿಗೆ ನನ್ನ ಜೋಳಿಗೆ ಬರಿದಾಯಿತು, ಮಂಚಣನವರೆ. ಇಲ್ಲದ ಆಜ್ಞೆಗಳನ್ನು ಸೃಷ್ಟಿಸಲು ನಾನೇನು ಮಂತ್ರವಾದಿಯೇ?”

“ರಾಜಪುರೋಹಿತರ ಮಂತ್ರದಂಡ, ಮಂತ್ರವಾದಿಯ ಮಾಯಾದಂಡಕ್ಕಿಂತ ಅದ್ಭುತವಾದದ್ದು. ಹಠಾತ್ತಾಗಿ ಅದು ಹಾವಾಗಿ ನಮ್ಮ ಮೇಲೆ ಬಿದ್ದರೂ ಬೀಳಬಹುದು, ಏನು ಹೇಳುವಿರಿ, ರುದ್ರಭಟ್ಟರೆ ?” .....ಎಂದು ಮಂಚಣನು ನಗೆಯಾಡಿದನು.

“ವೃದ್ಧಮಂತ್ರಿಗಳು ಹಾಸ್ಯಪ್ರಿಯರು !” .....ಎಂದು ರುದ್ರಭಟ್ಟನು ನಕ್ಕನು.

ಈ ಮಾತುಗಳು ನಡೆಯುತ್ತಿದ್ದಂತೆ ಹೊರಗೆ ಕಾಲ ಸಪ್ಪಳ ಕೇಳಿಸಿತು. ಕ್ರಮಿತನು ಬಾಗಿಲ ಕಡೆ ನೋಡಿ,