ಪುಟ:ಕ್ರಾಂತಿ ಕಲ್ಯಾಣ.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೪

ಕ್ರಾಂತಿ ಕಲ್ಯಾಣ


“ರಾಜಭಟರು ಆಪಾದಿತರನ್ನು ಕರೆತಂದಂತಿದೆ. ನಾವು ಈಗಲೆ ವಿಚಾರಣೆ ಪ್ರಾರಂಭಿಸಬೇಕು,” ಎಂದನು.

***

ಆ ದಿನ ಮುಂಜಾವಿನಲ್ಲಿ ಮಧುವರಸನು ಸ್ನಾನ ಪೂಜೆಗಳನ್ನು ಮುಗಿಸಿಕೊಂಡು ಹಜಾರಕ್ಕೆ ಬಂದಾಗ ಧರ್ಮಾಧಿಕರಣದ ಅಧಿಕಾರಿಯೊಬ್ಬನು ಬಾಗಿಲಲ್ಲಿ ಕಾದು ನಿಂತಿರುವುದನ್ನು ಕಂಡು, “ಒಳಗೆ ಬನ್ನಿ. ಏನಾಗಬೇಕಾಗಿದೆ?” ಎಂದನು.

ಅಧಿಕಾರಿ ಹಜಾರಕ್ಕೆ ಬಂದು, “ಮಧುವರಸರು ನೀವೇ ಅಲ್ಲವೆ?” ಎಂದು ಕೇಳಿದನು.

ಮಧುವರಸನು ಅಚ್ಚರಿಯಿಂದ, “ನಾನೇ ಮಧುವರಸ. ನೀವು ಯಾರು?” ಎಂದನು.

ಅಧಿಕಾರಿ ಹತ್ತಿರ ಬಂದು ಮಧುವರಸನ ಭುಜದ ಮೇಲೆ ಕೈಯಿಟ್ಟು “ರಾಜಾಜ್ಞೆಯಂತೆ ನೀವು ನನ್ನ ಬಂಧಿ. ಕೂಡಲೆ ನನ್ನ ಸಂಗಡ ಬನ್ನಿರಿ,” ಎಂದನು.

ಈ ಮಾತುಗಳನ್ನು ಕೇಳುತ್ತಲೆ ಬಾಗಿಲ ಮರೆಯಲ್ಲಿ ನಿಂತಿದ್ದ ಆಯುಧಪಾಣಿಗಳಾದ ಇಬ್ಬರು ಭಟರು ಒಳಗೆ ಬಂದು ಮಧುವರಸನ ಇಕ್ಕೆಲಗಳಲ್ಲಿ ನಿಂತರು.

ಅಧಿಕಾರಿ ರಾಜಭಟರ ಈ ಶಿಸ್ತಿನ ವರ್ತನೆಯನ್ನು ಕಂಡು ಮಧುವರಸನ ಮುಖದಲ್ಲಿ ವಿಷಾದ ಆಶ್ಚರ್ಯಗಳ ಗಂಭೀರ ಭಾವ ಮಿಂಚಿ ಮರೆಯಾಯಿತು. ಪ್ರತಿಕ್ಷಣದಲ್ಲಿ ಅವನು ಶಾಂತಿ ಸಮಾಧಾನಗಳ ಮಿದುನಗೆ ಸೂಸಿ,

“ನಾನು ಸಿದ್ಧನಾಗಿದ್ದೇನೆ, ನಾಯಕರೆ. ಆದರೆ ಬಂಧಿಸುವ ಮೊದಲು ಆಜ್ಞಾ ಪತ್ರವನ್ನು ತೋರಿಸಬೇಕೆಂಬುದು ಧರ್ಮಾಧಿಕರಣದ ನಿಬಂಧನೆಯಲ್ಲವೆ?” ಎಂದು ಕೇಳಿದನು.

ಆಗ ಅಧಿಕಾರಿ ಮಧುವರಸನಿಗೆ ವಂದಿಸಿ ಸೊಂಟದಲ್ಲಿದ್ದ ಆಜ್ಞಾಪತ್ರವನ್ನು ತೆಗೆದುಕೊಟ್ಟನು. ಧರ್ಮಾಧಿಕರಣದ ಶ್ರೇಷ್ಠ ನ್ಯಾಯಮೂರ್ತಿಯಾಗಿ ಸ್ವಯಂ ನಾರಣಕ್ರಮಿತನೇ ಆಜ್ಞೆಗೆ ಸಹಿ ಹಾಕಿರುವುದನ್ನು ಕಂಡಾಗ ಮಧುವರಸನಿಗೆ ಆಶ್ಚರ್ಯವಾಗಲಿಲ್ಲ. ಬಿಜ್ಜಳನ ರಾಜ್ಯಭಾರ ನಿರೂಪಣೆಯ ಅನಂತರ ಮಂಗಳ ವೇಡೆಯಲ್ಲಿ ನಡೆದ ದುರಂತ ಘಟನೆಗಳ ಪ್ರತಿಕ್ರಿಯೆಯೋ ಇದು? ಶರಣರ ಮೇಲಿನ ದಬ್ಬಾಳಿಕೆ ದುರಾಕ್ರಮಣಗಳ ನಾಂದಿಯೋ ನನ್ನ ಬಂಧನ? ಎಂದು ಅವನು ಶಂಕಿಸಿದನು.

ಅಧಿಕಾರಿಗೆ ಆಜ್ಞಾಪತ್ರವನ್ನು ಹಿಂದಿರುಗಿ ಕೊಟ್ಟು ಅವನು, “ನನ್ನ ಪುತ್ರಿಯಿಂದ