ಪುಟ:ಕ್ರಾಂತಿ ಕಲ್ಯಾಣ.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೦೫


ಬೀಳ್ಕೊಂಡು ಅಗತ್ಯವಾದ ಉಡಿಗೆ ತೊಡಿಗೆಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡುವಿರಲ್ಲವೆ?” ಎಂದನು.

“ನಿಮ್ಮನ್ನು ಕಾರಾಗೃಹ ಸೇರಿಸುವವರೆಗೆ ಎಚ್ಚರದಿಂದ ಸಂಗಡಲೇ ಇರಬೇಕೆಂದು ಧರ್ಮಾಧಿಕರಣದ ಆಜ್ಞೆ. ಅದರಂತೆ ನಾನು ನಡೆಯಬೇಕಾಗುತ್ತದೆ,” -ಎಂದು ಅಧಿಕಾರಿ ವಿನಯದಿಂದ ಹೇಳಿದನು.

ಹಜಾರದ ಒಳಬಾಗಿಲಲ್ಲಿ ನಿಂತು ಈ ಮಾತುಗಳನ್ನು ಕೇಳುತ್ತಿದ್ದ ಲಾವಣ್ಯವತಿ ಮುಂದೆ ಬಂದು ತಂದೆಯ ಕಾಲುಗಳಿಗೆ ಎರಗಿ, ಗದ್ಗದ ಕಂಠದಿಂದ, “ಕ್ರಮಿತರು ತಮ್ಮ ಹಗೆ ತೀರಿಸಿಕೊಂಡರು, ಅಣ್ಣ. ನಿಮ್ಮನ್ನು ಬಂಧನದಲ್ಲಿಟ್ಟರೆ ನಾನು ಅರಕ್ಷಿತೆಯಾಗುವೆನು,” ಎಂದು ಹೇಳಿದಳು.

ಮಧುವರಸನು ಮಗಳ ಭುಜ ಹಿಡಿದೆತ್ತಿ ಸಮಾಧಾನಪಡಿಸುತ್ತ, “ಶರಣರು ಯಾವಾಗಲೂ ಅರಕ್ಷಿತರಾಗುವುದಿಲ್ಲ, ಮಗಳೆ. ಶಿವನು ನಮ್ಮ ಏಕಮಾತ್ರ ಆಶ್ರಯ, ಏಕಮಾತ್ರ ರಕ್ಷಣೆ. ವಿಪತ್ತನ್ನು ಧೈರ್ಯದಿಂದ ಎದುರಿಸುವುದು ಶರಣರ ಶೀಲ. ನೀನು ಮಧುವರಸನ ಮಗಳು, ಕಾಳಿದಾಸ ಚಮೂಪತಿಯ ವಂಶೋದ್ಭವಳು. ಈ ಗೌರವವನ್ನು ಶಿರಸ್ಸಿನಲ್ಲಿ ಧರಿಸಿ, ಅದಕ್ಕೆ ತಕ್ಕಂತೆ ನಡೆ. ಇನ್ನು ನಾನು ಹೋಗುತ್ತೇನೆ,” ಎಂದನು.

ತುಸು ಹೊತ್ತಿನ ಮೇಲೆ ಧರ್ಮಾಧಿಕರಣದ ಜೋಡೆತ್ತಿನ ರಥದಲ್ಲಿ ರಾಜಭಟರು ಮಧುವರಸನನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋದರು. ಚಾಲುಕ್ಯ ಅರಸರ ಒಂದು ಪ್ರಾಚೀನ ಅರಮನೆ ಬಿಜ್ಜಳನ ಆಡಳಿತದಲ್ಲಿ ಧರ್ಮಾಧಿಕರಣದ ಚಾವಡಿಯಾಗಿ ಮಾರ್ಪಟ್ಟಿತ್ತು. ವಿಚಾರಣಾಧೀನರಾದವರನ್ನು ಆ ಅರಮನೆಯ ನೆಲಮಾಳಿಗೆಯಲ್ಲಿ ತಾತ್ಕಾಲಿಕವಾಗಿ ಬಂಧನದಲ್ಲಿಡುತ್ತಿದ್ದರು. ಅಲ್ಲಿಯ ಒಂದು ಸಾಮಾನ್ಯ ಕೋಣೆ ಮಧುವರಸನ ಸೆರೆಮನೆಯಾಯಿತು.

ಕಾರಾಗೃಹದ ಅಧಿಕಾರಿಗಳು ತನ್ನನ್ನು ಸಾಮಾನ್ಯ ಅಪರಾಧಿಯಂತೆ ನಡೆಸಿ ಕೊಳ್ಳುತ್ತಿರುವುದನ್ನು ಕಂಡು ಮಧುವರಸನಿಗೆ ಸಮಾಧಾನವೇ ಆಯಿತು. “ಪದವಿ ಪ್ರತಿಷ್ಠೆಗಳ ಮೇಲಿನ ಅಭಿಮಾನವೇ ಅನರ್ಥದ ಮೂಲ. ಅದನ್ನು ತ್ಯಜಿಸುವ ಅವಕಾಶವನ್ನು ಕಲ್ಪಿಸಿ ಕ್ರಮಿತನು ನನಗೆ ಉಪಕಾರವನ್ನೇ ಮಾಡಿದನು. ಏಕಾಂತವಾಸದ ಸುಯೋಗ ದೊರಕಿಸಿಕೊಟ್ಟನು,” ಎಂದು ಭಾವಿಸಿ ಅವನು ಮನಸ್ಸಿನ ಉದ್ವೇಗವನ್ನು ಮರೆಯಲು ಪ್ರಯತ್ನಿಸಿದನು.

ಮಂತ್ರಿಪದವಿಯಿಂದ ನಿವೃತ್ತನಾಗಿ, ಅಸ್ವಸ್ಥತೆಯಿಂದ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದರೂ ಇದುವರೆಗೆ ಮಧುವರಸನಿಗೆ ನಿಜವಾದ ಏಕಾಂತವಾಸ