ಪುಟ:ಕ್ರಾಂತಿ ಕಲ್ಯಾಣ.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೬

ಕ್ರಾಂತಿ ಕಲ್ಯಾಣ


ಲಭಿಸಿರಲಿಲ್ಲ. ನಾಗರಿಕರು, ಅಧಿಕಾರಿಗಳು, ವರ್ತಕ ಪ್ರಮುಖರು, ಶರಣರು, ಇವರೇ ಮುಂತಾಗಿ ಎಲ್ಲ ವರ್ಗಗಳ ಜನರು ಯಾವುದಾದರೊಂದು ಕಾರ್ಯಕ್ಕಾಗಿ ಸಲಹೆ ಕೇಳಲು ಪ್ರತಿದಿನ ಅವನ ಬಳಿಗೆ ಬರುತ್ತಿದ್ದರು. ಒಂದೊಂದು ದಿನ ವಿಶ್ರಾಂತಿಯ ಅವಕಾಶವೂ ಸಿಕ್ಕುತ್ತಿರಲಿಲ್ಲ.

ಮದುವೆಯಾದ ಮೇಲೆ ಲಾವಣ್ಯವತಿ ಗಂಡನ ಮನೆಗೆ ಹೋಗಿರಲಿಲ್ಲ. ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಮಧುವರಸನ ಉದ್ದೇಶವಾಗಿತ್ತು. ಹರಳಯ್ಯ ಇದಕ್ಕೆ ಒಪ್ಪಿಗೆ ಕೊಟ್ಟಿದ್ದನು. ಆದರೆ ಮುದಿ ತಂದೆಯನ್ನು ಒಂಟಿಗನಾಗಿ ಮಾಡಿ ಮಾವನ ಸುಖವಸತಿಯಲ್ಲಿರಲು ಶೀಲವಂತ ಒಪ್ಪಿರಲಿಲ್ಲ. ಧರ್ಮಾಧಿಕರಣದ ವ್ಯವಹಾರ ಯಾವ ರೀತಿ ಕೊನೆಗೊಳ್ಳುವುದೆಂಬುದನ್ನು ನೋಡಿಕೊಂಡು ಮುಂದಿನ ವಿಚಾರ ನಿರ್ಧರಿಸಬಹುದೆಂದು ಎಲ್ಲರೂ ಸುಮ್ಮನಿದ್ದರು.

ಈ ಪರಿಸ್ಥಿತಿಯಲ್ಲಿ ತನ್ನ ಬಂಧನದಿಂದ ಲಾವಣ್ಯವತಿ, ಶೀಲವಂತ, ಹರಳಯ್ಯ ಇವರ ಮೇಲೆ ಆಗುವ ಪರಿಣಾಮವೇನು ? ಎಂದು ಯೋಚಿಸುತ್ತ ಮಧುವರಸನು ಸೆರೆಮನೆಯ ಮುರುಕು ಮಂಚದ ಮೇಲೆ ಮಲಗಿದನು.

ಒಂದು ಹಳೆಯ ಮಂಚ, ಹುಲ್ಲು ತುಂಬಿದ ಹಾಸಿಗೆ ದಿಂಬುಗಳು, ಪಾರ್ಶ್ವದಲ್ಲೊಂದು ಕಾಲ್ಮಣೆ, ಮಣ್ಣಿನ ಕೆಲವು ತಟ್ಟೆ ಮಡಿಕೆಗಳು,-ಇವು ಆ ಕೊಠಡಿಯಲ್ಲಿದ್ದವು. ಮಧುವರಸನು ಸಂಗಡ ತಂದಿದ್ದ ಗಂಟನ್ನು ಬಿಚ್ಚಿ ಮಡಿಬಟ್ಟೆಯೊಂದನ್ನು ಹಾಸಿಗೆಯ ಮೇಲೆ ಹಾಸಿಕೊಂಡಿದ್ದನು.

ಅರಮನೆಯ ನೆಲಮಾಳಿಗೆ ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆ ಮಾಳಿಗೆಗಳು ಧೂಳು ಇಲ್ಲಣಗಳಿಂದ ತುಂಬಿದ್ದವು. ಆಳೆತ್ತರದಲ್ಲಿದ್ದ ಸಣ್ಣ ಗವಾಕ್ಷದಿಂದ ಗಾಳಿ ಬೆಳಕುಗಳು ಪ್ರಯಾಸದಿಂದ ಒಳಗೆ ಬರಬೇಕಾಗಿತ್ತು.

ಕಾರಾಗಾರದ ಅರೆಗತ್ತಲಲ್ಲಿ, ತೆರೆದ ಕಣ್ಣುಗಳಿಂದ, ಬರಿ ಗೋಡೆಗಳನ್ನು ನೋಡುತ್ತಿದ್ದಂತೆ ಮಧುವರಸನು ಚಿಂತಾಭಾರದಿಂದ ಕುಗ್ಗಿದನು. ಮನಸ್ಸು ಕಳವಳದಿಂದ ತಲ್ಲಣಗೊಂಡಿತು. ಬಾಹ್ಯ ಜಗತ್ತಿನಿಂದ ದೂರವಾಗಿ ದುಃಖ ದುರಂತಗಳಿಂದ ಸೀಮಿತವಾದ ಅಂಧಕಾರಮಯ, ಚೈತನ್ಯಶೂನ್ಯ ಪ್ರದೇಶದಲ್ಲಿ ತಾನು ಬಂಧಿಯಾಗಿರುವುದಾಗಿ ತಿಳಿದನು. ಬಿಜ್ಜಳನ ಮಂತ್ರಿಮಂಡಲದಲ್ಲಿ ಕುಶಲಮತಿಯಾದ ಸಚಿವನೆಂದು ಹೆಸರಾಗಿದ್ದ ಮಧುವರಸನು ಈಗಿಲ್ಲ. ಈ ಕತ್ತಲ ಕಾರಾಗೃಹದಲ್ಲಿರುವುದು ಅವನ ನಿರ್ಜಿವದೇಹ ಮಾತ್ರ. ಅವನ ಆತ್ಮ, ಬಂಧವಿಮುಕ್ತವಾಗಿ ಗಗನಕ್ಕೆ ಹಾರಿ ವಿಶಾಲ ವಿಶ್ವದಲ್ಲಿ ಎಲ್ಲಿಯೋ ವಿಹರಿಸುತ್ತಿದೆ ಎಂಬ ವಿಚಿತ್ರ ಕಲ್ಪನೆ ಅವನಲ್ಲಿ ಉದಯಿಸಿತು.