ಪುಟ:ಕ್ರಾಂತಿ ಕಲ್ಯಾಣ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

ಮುನ್ಸೂಚನೆಯೆ?

ಹಾಗಾದರೆ ನನ್ನ ಸಾಧನೆ ಫಲಿಸಿದಂತೆ....... ಎಂದು ಭಾವಿಸಿ ಪ್ರಕಟವಾಗಿ ಕ್ರಮಿತನು, “ಬ್ರಹ್ಮರಾಜ ಸೇಟರ ಕಾರ್ಯ ವಿಧಾನವನ್ನು ನಾನು ಅಭಿನಂದಿಸುತ್ತೇನೆ, ಅಗ್ಗಳದೇವರಸರೆ. ಆದರೆ ಕಲ್ಯಾಣದ ಶರಣರು ಯಾರ ಹಿತೋಕ್ತಿಗಳನ್ನೂ ಕೇಳುವ ಸ್ಥಿತಿಯಲ್ಲಿಲ್ಲ.” ಎಂದನು.

“ಕೇಳಲಿ, ಬಿಡಲಿ, ಹೇಳುವುದು ತಮ್ಮ ಹೊಣೆಯೆಂದು ಬ್ರಹ್ಮರಾಜ ಸೇಟರು ಭಾವಿಸಿದ್ದಾರೆ.”

“ಅವರಿಗೆ ಸೂಕ್ತ ತೋರಿದಂತೆ ಅವರು ನಡೆಯಲಿ, ಈಗ ನೀವು ನನ್ನ ಸಂಗಡ ಬನ್ನಿರಿ. ಪ್ರಭುಗಳು ನಿಮಗಾಗಿ ಕಾಯುವಂತಾಗಬಾರದು,”-ಎಂದು ಕ್ರಮಿತನು ಆಸನದಿಂದೆದ್ದನು.

“ಈ ಕ್ಷಣದಲ್ಲಿ ನಾನು ಹೊರಡಲು ಸಿದ್ಧನಾಗಿದ್ದೇನೆ. ಆದರೆ ಹೋಗುವ ಮುನ್ನ ಬ್ರಹ್ಮರಾಜಸೇಟರಿಗೆ ವಂದನೆಯ ಪತ್ರವೊಂದನ್ನು ಬರೆಯಬೇಕು.”-ಅಗ್ಗಳನು ಹೇಳಿದನು.

ಕ್ರಮಿತನು ಕೆಲವು ಕ್ಷಣಗಳು ಯೋಚಿಸುತ್ತಿದ್ದು, “ನಿಮ್ಮನ್ನು ಕರೆತರಬೇಕೆಂಬ ಅವಸರದ ಆಜ್ಞೆಯಲ್ಲಿ ಪತ್ರಲೇಖನಕ್ಕೆ ಅವಕಾಶ ಇರುವುದಿಲ್ಲ, ಅಗ್ಗಳದೇವರಸರೆ. ನಾಲ್ಕೇ ಪಂಕ್ತಿಯಲ್ಲಿ ಮುಗಿಸುವುದಾದರೆ ಬರೆಯಬಹುದು,” ಎಂದನು.

ಅಗ್ಗಳನು ಪಾರ್ಶ್ವದ ಮಣೆಯ ಮೇಲಿದ್ದ ಓಲೆಕಂಠವನ್ನು ತೆಗೆದುಕೊಂಡು ತಾಡಪತ್ರದಲ್ಲಿ ಬರೆದನು.

“ಪ್ರಿಯ ಬಂಧೂ,

ಅವಸರದ ಒಂದು ಕಾರ್ಯಕ್ಕಾಗಿ ನಾನು ಬಿಡಾರವನ್ನು ಬಿಡುತ್ತಿದ್ದೇನೆ. ಇಂದೇ ಹಿಂದಿರುಗಬಹುದು. ಇಲ್ಲವೇ ತಡವಾಗಬಹುದು. ನಿಮ್ಮ ಆದರದ ಆತಿಥ್ಯಕ್ಕಾಗಿ ವಂದನೆಗಳು-

ಅಗ್ಗಳದೇವ.”

ಕ್ರಮಿತನು ಪತ್ರವನ್ನು ಓದಿ, “ನೀವು ಕವಿಯಂತೆ ಪತ್ರಲೇಖನದಲ್ಲಿಯೂ ಚತುರರು, ಅಗ್ಗಳದೇವ. ನನ್ನ ಅಥವಾ ಬಿಜ್ಜಳರಾಯರ ಹೆಸರನ್ನು ಉಲ್ಲೇಖಿಸಬಹುದೆಂದು ಶಂಕಿಸಿದೆ. ನೀವು ನನ್ನ ಮನೋಗತವನ್ನು ಅರಿತು ಅದರಂತೆ ಮಾಡಿದಿರಿ,” ಎಂದನು.

“ನಿಮ್ಮ ಹೆಸರು ಹೇಳುವುದನ್ನು ಕಾರ್ಯಕರ್ತನಿಗೆ ಬಿಟ್ಟಿದ್ದೇನೆ.” ಎಂದು ಮನಸ್ಸಿನಲ್ಲಿ ಭಾವಿಸಿ ಅಗ್ಗಳನ್ನು ಪ್ರಕಟವಾಗಿ, “ಕಾರಣವಿಲ್ಲದೆ ಪ್ರಭುಗಳ ಹೆಸರೆತ್ತುವಂಥ