ಪುಟ:ಕ್ರಾಂತಿ ಕಲ್ಯಾಣ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೦೭


ಈ ಅಪೂರ್ವ ಅನುಭವದಲ್ಲಿ ತಲ್ಲೀನನಾಗಿದ್ದ ಮಧುವರಸನು, ಸೆರೆಮನೆಯ ಬಾಗಿಲು ತೆರೆದ ಸದ್ದು ಕೇಳಿ ತಟ್ಟನೆ ಎದ್ದು ಕುಳಿತನು. ಕಬ್ಬಿಣದ ಪಟ್ಟಿ ಅಲಗುಗಳಿಂದ ಭದ್ರಪಡಿಸಿದ್ದ ಭಾರವಾದ ಬಾಗಿಲನ್ನು ತೆರೆದುಕೊಂಡು ಇಳಿವಯಸ್ಸಿನ ಭಟನೊಬ್ಬನು ಒಳಗೆ ಬಂದನು. ಬೀಗದ ಕೈಗಳ ದೊಡ್ಡ ಗೊಂಚಲೊಂದು ಅವನ ಕೈಗೆ ಅಂಟಿಕೊಂಡಂತೆ ನೇತಾಡುತ್ತಿತ್ತು. ಸುರುಗಿನ ಅವನ ಗಲ್ಲಗಳಲ್ಲಿ ಕೂದಲು ಬೆಳೆದು ಗುಳಿಬಿದ್ದ ಕಣ್ಣುಗಳ ಆಳವನ್ನು ಮತ್ತಷ್ಟು ಹೆಚ್ಚಿಸಿದ್ದವು. ಸಾಕಾದಷ್ಟು ಬೆಳಕು ಗಾಳಿಗಳಿಲ್ಲದ ಕಡೆ ಹೆಚ್ಚು ದಿನಗಳನ್ನು ಕಳೆದಿದ್ದುದರಿಂದ ಅವನ ಮುಖ ಬಿಳಚಿ ಮೇಣದ ಬಣ್ಣಕ್ಕೆ ತಿರುಗಿತ್ತು. ನೀಳವಾದ ದೇಹ, ಮುರಿದು ಬೀಳಲಿದ್ದ ಮರದಂತೆ ಅರ್ಧ ಬಾಗಿತ್ತು.

ಮೆಲ್ಲನೆ ನಡೆಯುತ್ತ ವೃದ್ಧನು ಒಳಗೆ ಬಂದು, “ನಾನು ಜವರಾಯ. ಈ ಸೆರೆಮನೆಯ ಕಾವಲುಗಾರ, ಒಡೆಯರಿಗಾಗಿ ನೀರು ತಂದಿದ್ದೇನೆ,” ಎಂದು ಕೈಯಲ್ಲಿದ್ದ ಮಣ್ಣಿನ ಕುಡಿಕೆಯನ್ನು ಮಧುವರಸನಿಗೆ ಕೊಟ್ಟನು.

ಮಧುವರಸನು ತೆಗೆದುಕೊಂಡು ಕುಡಿದನು. ನೀರು ತುಂಬ ಸಿಹಿಯಾಗಿತ್ತು. ಬಾಡಿದ ಎಳೆ ಬಳ್ಳಿ ನೀರು ಬಿದ್ದಾಗ ಚೇತರಿಸಿಕೊಂಡು ಮೇಲೇಳುವಂತೆ, ಅವನ ಚೈತನ್ಯ ಜಾಗೃತವಾಯಿತು. "ನಾನು ಬಾಯಾರಿಕೆಯಿಂದ ಬಸವಳಿದು ಎಚ್ಚರತಪ್ಪಿದ್ದೆ, ಜವರಾಯ. ಇನ್ನು ಕೊಂಚಹೊತ್ತು ನೀನು ಬಾರದೆಹೋಗಿದ್ದರೆ ಉಳಿಯುತ್ತಿದ್ದೆನೋ ಇಲ್ಲವೊ? ನೀನು ಬಂದು ಕಾಪಾಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನು,” ಎಂದು ಅವನು ಆವೇಗದಿಂದ ಹೇಳಿದನು.

“ಮೇಲಿನ ಅಪ್ಪಣೆಯಾಯಿತು, ನಾನು ಬಂದೆ, ಒಡೆಯರೆ. ನಿಮ್ಮ ನೀರಿನ ಋಣ ತಪ್ಪಿಸುವುದು ಯಾರಿಗೂ ಸಾಧ್ಯವಲ್ಲ.” -ಜವರಾಯ ಕೈಯೆತ್ತಿ ಮೇಲೆ ತೋರಿಸಿ ಹೇಳಿದನು.

ಅವನು ತೋರಿಸಿದ್ದು ಧರ್ಮಾಧಿಕರಣದ ಅಧಿಕಾರಿಯನ್ನೋ ಅಥವಾ ಜಗನ್ನಿಯಾಮಕನನ್ನೋ ಎಂದು ತಿಳಿಯಲಾರದೆ ಮಧುವರಸನು,

“ಈ ಧೂಳು ಇಲ್ಲಣ ತುಂಬಿದ ನೆಲಮನೆ ನನ್ನ ವಾಸಗೃಹವಾದದ್ದು ಮೇಲಿನ ಅಪ್ಪಣೆಯಿಂದಲೇ ಅಲ್ಲವೆ?” ಎಂದು ಅರ್ಥಗರ್ಭಿತವಾಗಿ ನುಡಿದನು.

“ಏಕೆ ಒಡೆಯರೆ? ನೆಲಮನೆ ಚೆನ್ನಾಗಿಲ್ಲವೆ? ದಶಗಣದ ಸಿಂಗಿರಾಜ ಇಲ್ಲಿ ಆರು ವರ್ಷ ಬಂಧಿಯಾಗಿದ್ದ,” -ಎಂದನು ಜವರಾಯ.

“ಈ ಕಾರಾಗೃಹದ ಇತಿಹಾಸ ನನಗೆ ತಿಳಿಯದು. ಯಾರು ಆ ಸಿಂಗಿರಾಜ?”
“ಬನವಸೆ ನಾಡಿನ ಒಬ್ಬ ಸಾಮಂತ, ಒಡೆಯರೆ. ಕಪ್ಪಕಾಣಿಕೆಗಳನ್ನು