ಪುಟ:ಕ್ರಾಂತಿ ಕಲ್ಯಾಣ.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೦೯


ಮಧುವರಸನ ದೃಷ್ಟಿ ಸೆಳೆಯಿತು. ಅವನು ಓದಿದನು :

ಫಲವೀವ ವಸ್ತುವನು ಪರಹಿತಾರ್ಥಕೆ ಕೊಟ್ಟ
ಫಲವದಗಣಿತ ಕಣಾ ! ಮರ್ತ್ಯದೊಳು, ನೀನಿರ್ದ
ನೆಲೆಯೆ ಕೈಲಾಸವಹುದೀ ಪ್ರಮಥರೀ ರುದ್ರಲೋಕ
ಸಹಿತಾನೆ ಬಹೆನು *

“ಫಲಕೊಡುವ ವಸ್ತುಗಳನ್ನು ಪರಹಿತಕ್ಕಾಗಿ ದಾನ ಮಾಡುವುದಕ್ಕಿಂತ ಹೆಚ್ಚಿನ ತ್ಯಾಗ ಜಗತ್ತಿನಲ್ಲಿ ಮತ್ತಾವುದಿದೆ? ಇಂತಹ ಮಹಾತ್ಯಾಗಿಯಾದ ನೀನು ಎಲ್ಲಿರುವೆಯೋ ಅದೇ ಕೈಲಾಸ. ನಿನ್ನ ಒಡನಿರುವವರೆಲ್ಲ ಪ್ರಮಥರು. ರುದ್ರ ಲೋಕದೊಡನೆ ನಾನು ಅಲ್ಲಿ ಬಂದು ನೆಲಸುತ್ತೇನೆ.”

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ದೊರೆತ ಕಾವ್ಯಭಾಗದಿಂದ ತಿಳಿಯಲಾರದೆ ಮಧುವರಸನು ಚಿಂತಿಸತೊಡಗಿದನು.

.....ಭಕ್ತಿ ಭಂಡಾರಿ, ತ್ಯಾಗಮೂರ್ತಿ, ಬಸವಣ್ಣನರು ಕಲ್ಯಾಣದಲ್ಲಿದ್ದವರೆಗೆ ನಗರ ಸುರಕ್ಷಿತವಾಗಿತ್ತು. ಶರಣರು ಸನಾಥರಾಗಿದ್ದರು. ಅವರ ನಿರ್ವಾಸನದಿಂದ ಕಲ್ಯಾಣವೀಗ ಅರಕ್ಷಿತ. ಶರಣರು ಅನಾಥರು. ಈ ಪರಿಸ್ಥಿತಿಯಲ್ಲಿ ನಗರ ಅಪಾಯಕ್ಕೀಡಾಗುವುದು ಅಸಂಭವವಲ್ಲ. ಶರಣರ ಮೇಲೆ ಬಿಜ್ಜಳನ ದಬ್ಬಾಳಿಕೆ ದೌರ್ಜನ್ಯ ಇನ್ನು ಪ್ರಾರಂಭವಾಗುವುದು. ಮುಂದೆ ಶರಣರಿಗೆ ಎಂತಹ ಅಗ್ನಿ ಪರೀಕ್ಷೆ ಕಾದಿದೆಯೋ ಬಲ್ಲವರಾರು? ಶರಣರ ಏಳುಬೀಳುಗಳೆಲ್ಲ ಈಗ ಶಿವನ ಕೈಯಲ್ಲಿ. ಬಸವಣ್ಣನವರೇ ಒಂದು ವಚನದಲ್ಲಿ ಹೇಳಿದಂತೆ 'ಹಾಲಲದ್ದು ನೀರಲದ್ದು ನಿಮ್ಮ ಧರ್ಮ!' ಎಂದು ಸರ್ವಾರ್ಪಣ ಮಾಡುವುದೊಂದೇ ನಮಗುಳಿದಿರುವ ದಾರಿ. ಚೆನ್ನಬಸವಣ್ಣನವರು ಮಂತ್ರಿಪದವಿಗೇರಿದರು. ಆದರೆ ಬಿಜ್ಜಳನ ಸಂಚು ಸಂಧಾನಗಳಿಂದ ಶರಣರನ್ನು ರಕ್ಷಿಸುವ ಶಕ್ತಿ ಸಾಹಸಗಳು ಅವರಿಗಿದೆಯೆ?

ಮಧುವರಸನು ಚಿಂತಿಸುತ್ತಿದ್ದಂತೆ ಜವರಾಯ ವಿನಯದಿಂದ, “ಒಡೆಯರು ದಯಮಾಡಿ ನನ್ನ ಸಂಗಡ ಬರಬೇಕು. ಇಲ್ಲವೆ ಕಮ್ಮಾರನು ನನ್ನ ಮೇಲೆ ಕೋಪ ಮಾಡುವನು. ಚಮ್ಮಟಿಗೆಯಂತೆ ಕರುಣೆ ಮಾನವೀಯತ್ವಗಳನ್ನೇ ಅರಿಯದ ಜನ ಅವರು,” ಎಂದನು.

“ಕಮ್ಮಾರನೊಡನೆ ನಮಗೇನು ಕೆಲಸ?”
-ಅನ್ಯ ಮನಸ್ಕನಂತೆ ಮಧುವರಸನು ಪ್ರಶ್ನಿಸಿದನು.

_________

  • ಸಿಂಗಿರಾಜ ಪುರಾಣ, ಸಂಧಿ ೪. ಪದ್ಯ ೪೬