ಪುಟ:ಕ್ರಾಂತಿ ಕಲ್ಯಾಣ.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೧೧

ನಡುವೆ ಉರಿಯುತ್ತಿದ್ದ ಕುಲುಮೆಯ ಮುಂದೆ ಕಮ್ಮಾರನೂ ಅವನ ಇಬ್ಬರು ಸಹಾಯಕರೂ ಕುಳಿತ್ತಿದ್ದರು.

ಜವರಾಯನನ್ನು ನೋಡುತ್ತಲೆ ಅವರಲ್ಲೊಬ್ಬನು ತಿದಿಯೊತ್ತಿ ಕುಲುಮೆಯ ಉರಿ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದನು.

ಕಮ್ಮಾರನು ಜವರಾಯನ ಬಳಿ ಬಂದು, ಗೋಡೆಗೆ ತಗುಲಿಹಾಕಿದ್ದ ಬೇರೆ ಬೇರೆ ಗಾತ್ರದ ಸರಪಳಿಗಳನ್ನು ತೋರಿಸಿ, "ಯಾವುದು ಹಾಕಲಿ, ಅಣ್ಣ? ನೂರರದ್ದೋ ಇನ್ನೂರರದೋ?” ಎಂದು ಕೇಳಿದನು. ಅವನ ಗಡಸುದನಿ, ಮಾಸಿದ ಅಂಗಿ ಚಲ್ಲಣಗಳು, ಅವನೊಬ್ಬ ದಿನಗೂಲಿಯ ಕೆಲಸಗಾರನೆಂಬುದನ್ನು ತೋರಿಸುತ್ತಿತ್ತು. ಸಹಾಯಕರು ಒಡೆಯನಿಗಿಂತ ಒರಟಾಗಿದ್ದರು.

"ನೂರು ಸೇರಿನ ಆ ಸಣ್ಣ ಸರಪಣಿ ಹಾಕು,” -ಎಂದು ಕಮ್ಮಾರನಿಗೆ ಹೇಳಿ ಜವರಾಯ, ಮಧುವರಸನ ಕಡೆ ತಿರುಗಿ, "ಸಿಂಗಿರಾಜನಿಗೆ ಇನ್ನೂರು ಸೇರಿನ ದೊಡ್ಡ ಸರಪಣಿ ಹಾಕಿತ್ತು, ಒಡೆಯರೆ. ಅವನು ನಿಮಗಿಂತ ಗಟ್ಟಿಮುಟ್ಟಾದ ಆಳು. ಕಸರತ್ತು ಮಾಡಿ ಮೈ ಚೆನ್ನಾಗಿ ಬೆಳಸಿಕೊಂಡಿದ್ದ,” ಎಂದನು.

"ಕೈಗೋ ಕಾಲಿಗೋ?” -ಕಮ್ಮಾರ ಮತ್ತೆ ಕೇಳಿದನು.
"ಎರಡಕ್ಕೂ."

ಕಮ್ಮಾರನು ಗೋಡೆಯ ಹತ್ತಿರ ಹೋಗಿ ಸರಪಣಿಯೊಂದನ್ನು ತೆಗೆದನು. ಘಣ ಘಣ ಶಬ್ದದಿಂದ ಅದು ಕೆಳಗೆ ಬಿತ್ತು. ಕಮ್ಮಾರ ಅದನ್ನು ತೆಗೆದುಕೊಂಡು, ಮಧುವರಸನ ಕೈಕಾಲುಗಳ ಅಳತೆಮಾಡಿ, "ಆರು ಮತ್ತು ಎಂಟು ಅಂಗುಲ,” ಎಂದು ಕುಲುಮೆಯ ಹತ್ತಿರಿದ್ದವರಿಗೆ ಕೂಗಿ ಹೇಳಿದನು, -ಅಳತೆ ತೆಗೆದುಕೊಂಡ ಸಿಂಪಿಯಂತೆ.

ಕೊಂಚ ಹೊತ್ತಿಗೆ ಸರಪಣಿ ಸಿದ್ಧವಾಯಿತು. ಕಮ್ಮಾರನೂ ಅವನ ಸಹಾಯಕರೂ ಅದನ್ನು ಮಧುವರಸನ ಕೈಕಾಲುಗಳೀಗೆ ತೊಡಿಸಿದರು. ಅದಕ್ಕಾಗಿ ಅವರು ಅವನನ್ನು ಹೀಗೆ ಹಾಗೆ ನಿಲ್ಲಿಸಿ, ಬೆನ್ನು ತಟ್ಟಿ, ಕೈಕಾಲುಗಳನ್ನಾಡಿಸಿ ನೋಡಬೇಕಾಯಿತು, ಎತ್ತು ಕುದುರೆಗಳಿಗೆ ಗೊಲಸು ಕಟ್ಟಿ ನೋಡುವಂತೆ.

"ಈಗ ನಾನು ಇವರ ದೃಷ್ಟಿಯಲ್ಲಿ ಮನುಷ್ಯನಲ್ಲ, ಕೇವಲ ಪಶು. ದ್ವೇಷ ಆಸಕ್ತಿಗಳಿಲ್ಲದೆ ನಿರ್ಲಿಪ್ತಭಾವದಿಂದ ಇವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನೇಕೆ ಚಿಂತಿಸಬೇಕು?” ಎಂದು ಮಧವರಸನು ಸುಮ್ಮನೆ ನಿಂತಿದ್ದನು.

ಅವನು ಮತ್ತೆ ತನ್ನನ್ನು ಬಂಧಿಸಿದ್ದ ಕೋಣೆಗೆ ಹೋದಾಗ ಸರಪಣಿಯ ಭಾರದಿಂದ ಕೈಕಾಲುಗಳು ಸೋತಿದ್ದವು. ಮಂಚದ ಮೇಲೆ ಕುಳಿತುಕೊಳ್ಳಲು