ಪುಟ:ಕ್ರಾಂತಿ ಕಲ್ಯಾಣ.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೨

ಕ್ರಾಂತಿ ಕಲ್ಯಾಣ

ಹೋಗಿ ಕಾಲು ತೊಡರಿ ಬಿದ್ದನು. ಸಂಗಡಿದ್ದ ಜವರಾಯ ಎತ್ತಿ ಮಲಗಿಸಿ, ಸರಪಣಿಯಿಂದ ತೊಂದರೆಯಾಗದಿರಲು, ಕೈಕಾಲುಗಳನ್ನ ಹೇಗಿಟ್ಟುಕೊಳ್ಳಬೇಕು, ಹೇಗೆ ಮಲಗಬೇಕು ಎಂದು ತೋರಿಸಿಕೊಟ್ಟನು.

ಬಳಿಕ "ಈಗ ನೀವು ಕೊಂಚ ಕಾಲ ವಿಶ್ರಮಿಸಿಕೊಳ್ಳಿ, ಒಡೆಯರೆ. ನಾನು ಹೋಗಿ ನಿಮಗೆ ಊಟಕ್ಕೆ ತರುತ್ತೇನೆ,” ಎಂದನು ಜವರಾಯ.

"ಸೆರೆಮನೆಯ ಕೂಳು ನನಗೆ ಬೇಡ, ಜವರಾಯ,” -ಮಧುವರಸ ಬೇಸರದಿಂದ ಹೇಳಿದನು.

"ತಿನ್ನದಿದ್ದರೆ ಹೇಗೆ ಒಡೆಯರೆ? ಮೇಲಿನ ಅಪ್ಪಣೆಯಂತೆ ನೀವು ನಡೆಯಲೇ ಬೇಕು. ಹೊರಗಿನಿಂದ ಊಟ ತರಿಸಿಕೊಳ್ಳಲು ಅವಕಾಶವಿಲ್ಲ, ಎಂದು ಆಜ್ಞಾಪತ್ರದಲ್ಲಿ ಬರದಿದೆ."

"ನಾನು ಉಪವಾಸ ಮಾಡುತ್ತೇನೆ.” -ಮಧುವರಸನೆಂದನು, ನಿರ್ಧಾರಕ ಕಂಠದಿಂದ.

"ಹಾಗಾದರೆ ಒಡೆಯರ ಸಂಗಡ ನಾನೂ ಉಪವಾಸ ಮಾಡುತ್ತೇನೆ.":"ಅದಕ್ಕೆ ಮೇಲಿನ ಅಪ್ಪಣೆಯಾಗಿದೆಯೆ, ಜವರಾಯ?"

"ಆಜ್ಞಾಪತ್ರದಲ್ಲಿ ಆ ವಿಷಯವಿಲ್ಲ. ಆದರೂ ಒಡೆಯರು ಉಪವಾಸ ಮಾಡುವಾಗ ನಾನು ಊಟ ಮಾಡುವುದು ಹೇಗೆ? ನೀವು ಸೆರೆಮನೆಯಲ್ಲಿರುವವರೆಗೆ ನಾನು ನಿಮ್ಮ ರಕ್ಷಕ, ನಿಮ್ಮೊಡನೆ ನನ್ನ ಸಂಬಂಧ ಕಡಿಯಲಾಗದೆಂದು ಮೇಲಿನ ಅಪ್ಪಣೆಯಾಗಿದೆ."

"ನಾನು ಉಪವಾಸಮಾಡಿ ಸಾಯಲು ನಿರ್ಧರಿಸಿದ್ದೇನೆ, ಜವರಾಯ.":"ನನ್ನ ನಿರ್ಧಾರವೂ ಅದೇ."
"ಆಗ ಮೇಲಿನವರು ನಿನ್ನ ಮೇಲೆ ಕೋಪ ಮಾಡುವರು, ಶಿಕ್ಷೆ ವಿಧಿಸುವರು."

ಜವರಾಯನ ಸುರುಗಿದ ತುಟಿಗಳಲ್ಲಿ ವಿಡಂಬನೆಯ ಕಿರುನಗೆ ಮೂಡಿತು. ಗುಳಿಬಿದ್ದ ಕಣ್ಣುಗಳು ಅಪೂರ್ವ ಕಾಂತಿಯಿಂದ ಬೆಳಗಿದವು.

"ನಲವತ್ತು ವರ್ಷಗಳಿಂದ ನಾನು ಈ ಸೆರೆಮನೆಯಲ್ಲಿದ್ದೇನೆ, ಒಡೆಯರೆ. ತರುಣನಾಗಿ ಇಲ್ಲಿಗೆ ಬಂದೆ, ಈಗ ಬೆನ್ನು ಬಾಗಿದ ಮುದುಕನಾಗಿದ್ದೇನೆ. ಇದಕ್ಕಿಂತ ಹೆಚ್ಚಿನ ಶಿಕ್ಷೆ ಜಗತ್ತಿನಲ್ಲಿ ಮತ್ತಾವುದಿದೆ?” -ಎಂದು ಅವನು ಉತ್ತರ ಕೊಟ್ಟನು.

ತುಸು ಹೊತ್ತು ಇಬ್ಬರೂ ಮೌನ. ಆಮೇಲೆ ಜವರಾಯ, ಒಡೆಯರು ಒಪ್ಪುವುದಾದರೆ ಇಲ್ಲಿಯೇ ಅಡಿಗೆ ಮಾಡಿಕೊಳ್ಳಬಹುದು. ಬೇಕಾದ ಸಾಮಗ್ರಿಗಳನ್ನು ತಂದುಕೊಡುತ್ತೇನೆ,” ಎಂದನು.