ಪುಟ:ಕ್ರಾಂತಿ ಕಲ್ಯಾಣ.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೧೩

"ಮೇಲಿನವರು ಅದಕ್ಕೊಪ್ಪುವರೆ?"

"ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತೇನೆ. ಆದರೆ ಕೈಕಾಲುಗಳಿಗೆ ಸರಪಣಿ ತೊಟ್ಟ ನಿಮ್ಮಿಂದ ಆ ಕೆಲಸವಾಗುವುದೇ?"

ಮಧುವರಸನು ಕೆಲವು ಕ್ಷಣಗಳು ಯೋಚಿಸಿ, "ನಿನ್ನ ಸಹಾಯವಿದ್ದರೆ ಆಗ ಬಹುದು," ಎಂದನು.

ಅಡಿಗೆಯ ಏರ್ಪಾಡು ಮಾಡಲು ಹೊರಗೆ ಹೋದ ಜವರಾಯ ಕೊಂಚ ಹೊತ್ತಿಗೆ ಪುನಃ ಬಂದು, "ಒಡೆಯರು ದಯಮಾಡಿ ಈ ಹಾಲು ಕುಡಿದರೆ ನಾನು ಮೇಲೆ ಹೋಗಿ, ಅನುಮತಿ ಪಡೆದು ಬರುತ್ತೇನೆ," ಎಂದನು.

ನಿರಾಕರಿಸಲು ಮಧುವರಸನ ಮನ ಒಪ್ಪಲಿಲ್ಲ. ತೆಗೆದುಕೊಂಡು ಕುಡಿದನು. ದ್ರಾಕ್ಷಿ ಕೇಸರಿ ಸಕ್ಕರೆಗಳ ಸಂಪರ್ಕವಿಲ್ಲದಿದ್ದರೂ ಹಾಲು ರುಚಿಯಾಗಿತ್ತು. ಮಧುವರಸನು ಮಲಗಿ ಜೋಂಪುಹತ್ತಿ ನಿದ್ದೆಹೋದನು.

ಪುನಃ ಅವನಿಗೆ ಎಚ್ಚರವಾದಾಗ ಜವರಾಯ ಹತ್ತಿರ ನಿಂತು, "ಒಡೆಯರೆ! ಒಡೆಯರೆ!" ಎಂದು ಕೂಗುತ್ತಿದ್ದನು.

"ಏಕೆ, ಜವರಾಯ? ಎಷ್ಟು ಹೊತ್ತಾಗಿದೆ ಈಗ?" -ಎದ್ದು ಕುಳಿತು ಮಧುವರಸ ಕೇಳಿದನು.

"ಅಪರಾಹ್ನ ಮೊದಲ ಪ್ರಹರ ಮುಗಿಯುತ್ತ ಬಂದಿದೆ. ಒಡೆಯರು ದಯಮಾಡಿ ಸಂಗಡ ಬರಬೇಕು," -ಸಹಜ ವಿನಯದಿಂದ ಜವರಾಯ ಹೇಳಿದನು.

"ಪುನಃ ಎಲ್ಲಿಗೆ ಕರೆದುಕೊಂಡು ಹೋಗುವೆ?"

"ನ್ಯಾಯಾಸ್ಥಾನದ ಮುಂದೆ ವಿಚಾರಣೆಗೆ. ಮೇಲಿನ ಅಪ್ಪಣೆ ಆಗಿದೆ."

ಶೃಂಖಲಾಬದ್ಧನಾದ ಮಧುವರಸನನ್ನು ಕೈಹಿಡಿದೆಬ್ಬಿಸಿ ವೃದ್ಧ ಜವರಾಯ ಹೊರಗೆ ಕರೆದುಕೊಂಡು ಹೋದನು.

ನೆಲಮನೆಯ ಮೆಟ್ಟಿಲು ಹತ್ತಿರ ಧರ್ಮಾಧಿಕರಣದ ಭಟರು ಬಂಧಿಗಾಗಿ ಕಾದು ನಿಂತಿದ್ದರು.

ರಾಜಭಟರು ಮಧುವರಸನನ್ನು ಕರೆತಂದು ನ್ಯಾಯಪೀಠದೆದುರಿಗೆ ನಿಲ್ಲಿಸಿದರು.

ಆಗ ಅವನು ಧರಿಸಿದ್ದ ಮಡಿಕೆಯಳಿದು ಮಾಸಿದ ಉಡಿಗೆ ತೊಡಿಗೆಗಳು, ಬಾಡಿದ ಮುಖ, ಬಾಗಿದ ದೇಹ, ಕೈಕಾಲುಗಳಿಗೆ ತೊಡಿಸಿದ್ದ ಶೃಂಖಲೆಗಳು, ನೋಡಿದವರಿಗೆ ತಟ್ಟನೆ ಅವನ ಗುರುತು ಸಿಕ್ಕದಂತೆ ಮಾಡಿದ್ದವು.

ತನ್ನ ಶತ್ರುವಿನ ಈ ದುರವಸ್ಥೆಯನ್ನು ಕಂಡು ಕ್ರಮಿತನ ಮುಖದಲ್ಲಿ