ಪುಟ:ಕ್ರಾಂತಿ ಕಲ್ಯಾಣ.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೧೫

"ಕೋಳ ತೆಗೆಸದೆ ವಿಚಾರಣೆ ಪ್ರಾರಂಭವಾಗುವುದಿಲ್ಲ, ಕ್ರಮಿತರೆ. ನಿಮ್ಮ ನಿಲವು ನ್ಯಾಯಸಮ್ಮತವಲ್ಲ. ಚಾಲುಕ್ಯ ಧರ್ಮಾಧಿಕರಣದ ಮಾನವೀತ್ವ ವಿಶಾಲ ಭಾವನೆಗಳಿಗೆ ಕಳಂಕ ತರುವುದಾಗಿದೆ, ಅದು." -ಎಂದು ಮತ್ತೆ ಗಜರಿ ನುಡಿದನು.

ಕ್ರಮಿತನಾಗ ಅಪ್ರತಿಭನಾದನು. ವೃದ್ಧನೂ, ರಾಜಕೀಯದಲ್ಲಿ ಆಲಸ್ಯ ಪ್ರವೃತ್ತಿಯವನೂ ಆಗಿದ್ದ ಮಂಚಣನಿಂದ ಈ ಬಗೆಯ ಪ್ರತಿಭಟನೆಯನ್ನು ಕ್ರಮಿತನು ನಿರೀಕ್ಷಿಸಿರಲಿಲ್ಲ. ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಾರದೆ ಅವನು ಕೆಲವು ಕ್ಷಣಗಳು ಸುಮ್ಮನೆ ಕುಳಿತನು.

ನ್ಯಾಯಪೀಠದಲ್ಲಿ ಉದ್ಭವಿಸಿದ ಈ ಘರ್ಷಣೆಯನ್ನು ಕಂಡು ಮಧುವರಸನು ವಿಡಂಬನೆಯ ನಗೆ ಬೀರಿ, ಗಾಂಭೀರ್ಯದ ಸ್ಥಿರಕಂಠದಿಂದ,

"ನನ್ನ ಕೋಳಗಳ ವಿಚಾರವಾಗಿ ನ್ಯಾಯಪೀಠ, ವಿವಾದಕ್ಕೆ ತೊಡಗಬಾರದಾಗಿ ಬೇಡುತ್ತೇನೆ. ನನಗೆ ಕೋಳ ತೊಡಿಸುವ ಮೊದಲೆ ಈ ಚರ್ಚೆ ನಡೆದಿದ್ದರೆ, ಕಮ್ಮಾರನ ಶ್ರಮ ಉಳಿಯುತ್ತಿತ್ತು. ನನ್ನ ಗೌರವ ಪ್ರತಿಷ್ಠೆಗಳ ಮೇಲೆ ಧರ್ಮಾಧಿಕರಣದ ದಬ್ಬಾಳಿಕೆಯ ಅಗತ್ಯವಿರುತ್ತಿರಲಿಲ್ಲ. ಈವರೆಗೆ ನಾನು ಪ್ರಭುತ್ವಕ್ಕೆ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ಚಾಲುಕ್ಯ ಧರ್ಮಾಧಿಕರಣ, ಈ ಕಬ್ಬಿಣದ ತೊಡವುಗಳನ್ನು ನನಗೆ ಕರುಣಿಸಿದೆ. ಕೂಡಲೇ ನಾನು ಆ ಗೌರವವನ್ನು ಬಿಟ್ಟುಕೊಡುವುದಿಲ್ಲ. ಸರ್ವಾಧಿಕಾರಿಗಳು ಪುನಃ ಆಜ್ಞೆ ಮಾಡುವವರೆಗೆ ಅವುಗಳನ್ನು ಧರಿಸಿರುತ್ತೇನೆ. ನ್ಯಾಯಪೀಠ ವಿಚಾರಣೆಯನ್ನು ಪ್ರಾರಂಭಿಸಬೇಕಾಗಿ ನನ್ನ ಪ್ರಾರ್ಥನೆ." -ಎಂದು ಬಿನ್ನವಿಸಿಕೊಂಡನು.

ವಿಚಾರಣೆ ಪ್ರಾರಂಭವಾಗುವ ಮೊದಲೆ ತನಗಾದ ಪರಾಭವದಿಂದ ಕ್ರಮಿತನಿಗೆ ಲಜ್ಜೆಯಾಯಿತು. ಮಧುವರಸನ ಮಾತಿಗೆ ಪ್ರತಿ ಹೇಳುವ ಇಚ್ಛೆಇಲ್ಲದೆ ಮಂಚಣನು,

"ಬಿಜ್ಜಳ ಮಹಾರಾಯರ ಆಜ್ಜೆಯಾಗುವವರೆಗೆ ಕೋಳಗಳು ಹಾಗೆಯೇ ಇರಬೇಕೆಂಬುದು ಮಧುವರಸರ ಅಪೇಕ್ಷೆಯಾದರೆ ನಾನು ಅಡ್ಡಿ ಬರುವುದಿಲ್ಲ. ಇನ್ನು ವಿಚಾರಣೆ ಮೊದಲಾಗಬಹುದು," ಎಂದರು.

ಅಷ್ಟರಲ್ಲಿ ಕ್ರಮಿತನ ಇಂಗಿತದಂತೆ ಭಟನು ಮಧುವರಸನಿಗಾಗಿ ಆಸನವೊಂದನ್ನು ತಂದು ನ್ಯಾಯಪೀಠದ ಮುಂದಿಟ್ಟನು.

"ಆಪಾದಿತರು ಕುಳಿತುಕೊಂಡೇ ಪ್ರಶ್ನೆಗಳಿಗೆ ಉತ್ತರಕೊಡಬೇಕಾಗಿ ಧರ್ಮಾಧಿಕರಣದ ಅಪೇಕ್ಷೆ." -ಎಂದು ಕ್ರಮಿತನು ಹೇಳಿದಾಗ ಮಧುವರಸನು ಮಾರುತ್ತರ ಕೊಡದೆ ಕುಳಿತುಕೊಂಡನು.

ಕೆಲವು ಕ್ಷಣಗಳು ಸಭಾಂಗಣದಲ್ಲಿ ಮೌನ. ಆಮೇಲೆ ಧರ್ಮಾಧಿಕರಣದ